ಯುಎಸ್‌ ಓಪನ್‌: ಯೂಕಿಗೆ ಮುನ್ನಡೆ ನ್ಯೂಯಾರ್ಕ್‌: ಭಾರತದ ಯೂಕಿ ಭಾಂಬ್ರಿ ಅವರು ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಅರ್ಹತಾ ಹಂತದ ಎರಡನೇ ಸುತ್ತು ಪ್ರವೇಶಿಸಿದರು. ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 7–6, 6–4 ರಲ್ಲಿ ಮಾಲ್ಡೋವಾದ ರಾಡು ಅಲ್ಬೊಟ್‌ ಅವರನ್ನು ಮಣಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 552ನೇ ಸ್ಥಾನದಲ್ಲಿರುವ ಯೂಕಿ, ತನಗಿಂತ ಮೇಲಿನ ಕ್ರಮಾಂಕದಲ್ಲಿರುವ (107ನೇ ರ‍್ಯಾಂಕ್‌) ಆಟಗಾರನ ವಿರುದ್ಧ ಒಂದು ಗಂಟೆ 34 ನಿಮಿಷಗಳಲ್ಲಿ ಗೆಲುವು ಪಡೆದರು. ಅರ್ಹತಾ ಹಂತದ ಎರಡನೇ ಸುತ್ತಿನಲ್ಲಿ ಅವರು ಬೆಲ್ಜಿಯಂನ ಜಿಜೌ ಬೆರ್ಗ್‌ ವಿರುದ್ಧ ಪೈಪೋಟಿ ನಡೆಸುವರು. ಆದರೆ ಭಾರತದ ರಾಮಕುಮಾರ್‌ ರಾಮನಾಥನ್‌ ಮತ್ತು ಸುಮಿತ್ ನಗಾಲ್‌ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. 241ನೇ ರ‍್ಯಾಂಕ್‌ನ ಆಟಗಾರ ರಾಮಕುಮಾರ್‌ 3–6, 5–7 ರಲ್ಲಿ ಅಮೆರಿಕದ ಬ್ರೂನೊ ಕುಜುಹರ ಕೈಯಲ್ಲಿ ಪರಾಭವಗೊಂಡರು. ನಗಾಲ್‌ 6–7, 4–6 ರಲ್ಲಿ ಕೆನಡಾದ ವಸೆಕ್ ಪೊಸ್ಪಿಸಿಲ್‌ ಎದುರು ಸೋತರು. ಗಾಯದ ಕಾರಣ ಸುಮಾರು ಮೂರು ವರ್ಷ ಟೆನಿಸ್‌ನಿಂದ ದೂರವುಳಿದಿದ್ದ ಯೂಕಿ, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡಿದ್ದರು. ಅಲ್ಲಿ ಅರ್ಹತಾ ಹಂತದ ಎರಡನೇ ಸುತ್ತಿನಲ್ಲಿ ಸೋತಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.