ಫುಟ್‌ಬಾಲ್‌: ಕಪ್‌ಗೆ ಕೊರಿಯಾ ಅವಮಾನ ಶಾಂಘೈ (ಎಎಫ್‌ಪಿ): ಪಂಡಾ ಕಪ್ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದ ದಕ್ಷಿಣ ಕೊರಿಯಾ 18 ವರ್ಷದೊಳಗಿನವರ ತಂಡ ಟ್ರೋಫಿಗೆ ಅವಮಾನ ಮಾಡಿರುವುದು ವಿವಾದಕ್ಕೆ ಈಡಾಗಿದೆ. ಬುಧವಾರ ಚೆಂಗ್ಡುವಿನಲ್ಲಿ ನಡೆದ ಫೈನಲ್‌ನಲ್ಲಿ ಆತಿಥೇಯ ಚೀನಾವನ್ನು 3–0ಯಿಂದ ಕೊರಿಯಾ ಮಣಿಸಿತ್ತು. ಸಂಭ್ರಮದ ವೇಳೆ ಆಟಗಾರನೊಬ್ಬ ಟ್ರೋಫಿ ಮೇಲೆ ಕಾಲಿಟ್ಟಿದ್ದ. ಇದನ್ನು ನೋಡಿ ಇತರ ಆಟಗಾರರು ನಕ್ಕಿದ್ದರು. ಈ ‘ಸಂಭ್ರಮ’ದ ಚಿತ್ರ ಚೀನಾ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡ ನಂತರ ಟೀಕೆಗಳು ಕೇಳಿಬಂದಿದ್ದವು. ಹೀಗಾಗಿ ಕೊರಿಯಾ ತಂಡದವರು ಚೀನಾದ ಜನತೆಯಲ್ಲಿ ಕ್ಷಮೆ ಕೋರಿದ್ದರು. ಆದರೂ ಚೀನಾದ ಮಾಧ್ಯಮಗಳು ಸುಮ್ಮನಾಗಲಿಲ್ಲ. ಕೊರಿಯಾ ಆಟಗಾರರು ಟ್ರೋಫಿಗೆ ಮೂತ್ರ ವಿಸರ್ಜನೆ ಮಾಡುವುದಕ್ಕೂ ತಯಾರಾಗಿದ್ದರು ಎಂದು ಆರೋಪಿಸಿದ್ದವು. ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಚೆಂಗ್ಡು ಫುಟ್‌ಬಾಲ್ ಸಂಸ್ಥೆ ‘ಕ್ಷಮೆ ಕೋರಿರುವುದರಿಂದ ಆಗಿರುವ ಅವಮಾನವನ್ನು ತೊಡೆಯಲು ಸಾಧ್ಯವಿಲ್ಲ. ಅವರ ಬಳಿಯಿಂದ ಪ್ರಶಸ್ತಿಯನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ’ ಎಂದು ಹೇಳಿದೆ. ಕ್ರೀಡೆಯಲ್ಲಿ ಚೀನಾದ ಸಾಂಪ್ರದಾಯಿಕ ಎದುರಾಳಿಯಾಗಿರುವ ಕೊರಿಯಾ ತಂಡದವರು ಪಂಡ ಕಪ್‌ನ ಆರನೇ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಮತ್ತು ಥಾಯ್ಲೆಂಡ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.