ಜಬೇರ್‌– ರಿಬಾಕಿನ ಸೆಣಸು ಲಂಡನ್‌: ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿರುವ ಆನ್ಸ್‌ ಜಬೇರ್‌ ಮತ್ತು ಎಲೆನಾ ರಿಬಾಕಿನ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟಕ್ಕಾಗಿ ಶನಿವಾರ ಪೈಪೋಟಿ ನಡೆಸಲಿದ್ದಾರೆ. ಟ್ಯುನಿಷಿಯದ ಜಬೇರ್‌ ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಆಫ್ರಿಕಾದ ಮತ್ತು ಅರಬ್‌ ದೇಶದ ಮೊದಲ ಮಹಿಳೆ ಎಂಬ ಗೌರವ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಗ್ರ್ಯಾನ್‌ಸ್ಲಾಮ್‌ ಟ್ರೋಫಿ ಜಯಿಸಿದ ಆಫ್ರಿಕಾದ ಮೊದಲ ಮಹಿಳೆ ಎನಿಸಿಕೊಳ್ಳುವ ಕನಸು ಅವರದ್ದು. ಮತ್ತೊಂದೆಡೆ ರಿಬಾಕಿನ ಅವರು ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ ಕಜಕಸ್ತಾನದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ರಷ್ಯಾದಲ್ಲಿ ಹುಟ್ಟಿ ಬೆಳೆದ ರಿಬಾಕಿನ 2018ರ ವರೆಗೂ ಆ ದೇಶವನ್ನು ಪ್ರತಿನಿಧಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕಜಕಸ್ತಾನ ಪರ ಆಡುತ್ತಿದ್ದಾರೆ. ಉಕ್ರೇನ್‌ ಮೇಲಿನ ಯುದ್ಧದ ಕಾರಣ ಈ ಬಾರಿ ರಷ್ಯಾದ ಸ್ಪರ್ಧಿಗಳಿಗೆ ವಿಂಬಲ್ಡನ್‌ನಲ್ಲಿ ಪಾಳ್ಗೊಳ್ಳಲು ಅವಕಾಶ ನೀಡಿಲ್ಲ. ಆದರೆ ರಷ್ಯಾ ಮೂಲದ ರಿಬಾಕಿನ ಫೈನಲ್‌ ಪ್ರವೇಶಿಸಿರುವುದು ಟೂರ್ನಿಯ ಸಂಘಟಕರನ್ನು ‘ಇಕ್ಕಟ್ಟಿ’ಗೆ ಸಿಲುಕಿಸಿದೆ. ‘ಎಲೆನಾ ಅವರು ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿರುವುದು ಹೆಮ್ಮೆಯ ಸಂಗತಿ. ಆಕೆ ನಮ್ಮಲ್ಲಿ ಆಡಿ ಬೆಳೆದವಳು’ ಎಂದು ರಷ್ಯನ್‌ ಟೆನಿಸ್‌ ಫೆಡರೇಷನ್‌ನ ಅಧ್ಯಕ್ಷ ಶಾಮಿಲ್‌ ತಪಿಸ್ಚೇವ್‌ ಹೇಳಿದ್ದಾರೆ. ರಿಬಾಕಿನ ಅವರು ರೊಮೇನಿಯದ ಸಿಮೊನಾ ಹಲೆಪ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಫೈನಲ್‌ ಪ್ರವೇಶಿಸಿದ್ದರು. ನೀಲ್‌– ಕ್ರಾಚಿಕ್‌ಗೆ ಮಿಶ್ರ ಡಬಲ್ಸ್‌ ಪ್ರಶಸ್ತಿ: ಬ್ರಿಟನ್‌ನ ನೀಲ್‌ ಸ್ಕಪ್‌ಸ್ಕಿ ಮತ್ತು ಅಮೆರಿಕದ ಡೆಸಿರೆ ಕ್ರಾಚಿಕ್ ಅವರು ಸತತ ಎರಡನೇ ಬಾರಿ ಮಿಶ್ರ ಡಬಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದರು. ಗುರುವಾರ ನಡೆದ ಫೈನಲ್‌ನಲ್ಲಿ ಅವರು 6–4, 6–3 ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಮತ್ತು ಸಮಂತಾ ಸ್ಟಾಸರ್‌ ಜೋಡಿಯನ್ನು ಮಣಿಸಿದರು. ಇಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ನೀಲ್‌–ಕ್ರಾಚಿಕ್‌ ಮೊದಲ ಸೆಟ್‌ಅನ್ನು ಪ್ರಯಾಸದಿಂದ ಗೆದ್ದರು. ಎರಡನೇ ಸೆಟ್‌ನಲ್ಲಿ ಶಿಸ್ತಿನ ಆಟವಾಡಿ ಸತತ ನಾಲ್ಕು ಗೇಮ್‌ಗಳನ್ನು ಗೆದ್ದು ಕಿರೀಟ ಮುಡಿಗೇರಿಸಿಕೊಂಡರು. ಕ್ರಾಚಿಕ್‌ ಅವರ ಬಿರುಸಿನ ಸರ್ವ್ ಮತ್ತು ಸ್ಕಪ್‌ಸ್ಕಿ ಅವರು ನೆಟ್‌ ಬಳಿ ತೋರಿದ ಚಾಣಾಕ್ಷ ಆಟಕ್ಕೆ ಎದುರಾಳಿಗಳ ಬಳಿ ಉತ್ತರ ಇರಲಿಲ್ಲ. 28 ವರ್ಷದ ಕ್ರಾಚಿಕ್‌ ಅವರಿಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ದೊರೆತ ನಾಲ್ಕನೇ ಪ್ರಶಸ್ತಿ ಇದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.