ಫುಟ್‌ಬಾಲ್‌: ರಂಜಿತ್‌, ಸುನಿಲ್‌ ‘ಹ್ಯಾಟ್ರಿಕ್‌’ ಬೆಂಗಳೂರು: ರಂಜಿತ್‌ ಮತ್ತು ಸುನಿಲ್ ಕುಮಾರ್‌ ಅವರು ಭಾನುವಾರ ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗೋಲಿನ ಮಳೆ ಸುರಿಸಿದರು. ಇವರ ‘ಹ್ಯಾಟ್ರಿಕ್‌’ ಸಾಧನೆಯ ನೆರವಿನಿಂದ ಬೆಂಟೆಕ್ಸ್‌ ಎಫ್‌ಸಿ ತಂಡವು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿತು. ‘ಎಲ್‌’ ವಲಯದ ಪಂದ್ಯದಲ್ಲಿ ಬೆಂಟೆಕ್ಸ್‌ ಎಫ್‌ಸಿ 7–1 ಗೋಲುಗಳಿಂದ ಗೌತಮ ಎಫ್‌ಸಿ ತಂಡವನ್ನು ಸೋಲಿಸಿತು. ರಂಜಿತ್‌ ಅವರು 13, 24 ಮತ್ತು 57ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಸುನಿಲ್‌ 17, 28 ಮತ್ತು 38ನೇ ನಿಮಿಷಗಳಲ್ಲಿ ಗೋಲು ಗಳಿಸಿ ಗಮನ ಸೆಳೆದರು. ಈ ತಂಡದ ಅರುಣ್ ಸಿಂಗ್‌ 56ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಗೌತಮ ತಂಡದ ರಿತೇಶ್‌ 48ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು. ಇನ್ನೊಂದು ಪಂದ್ಯದಲ್ಲಿ ಆರ್‌.ಬಿ.ಐ ಎಫ್‌ಸಿ 2–1 ಗೋಲುಗಳಿಂದ ಬೆಂಗಳೂರು ವಾಂಡರರ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ವಿಜಯೀ ತಂಡದ ಶೇನ್‌ ಮತ್ತು ಜೋಶುವಾ ಕ್ರಮವಾಗಿ 51 ಮತ್ತು 58ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಡಾ.ಅಂಬೇಡ್ಕರ್‌ ಎಫ್‌ಸಿ ತಂಡವು 5–0 ಗೋಲುಗಳಿಂದ ನ್ಯಾಷನಲ್ಸ್‌ ಎಫ್‌ಸಿ ತಂಡದ ವಿರುದ್ಧ ಗೆದ್ದಿತು. ಅಂಬೇಡ್ಕರ್‌ ತಂಡದ ಕಾರ್ತಿಕೇಯನ್‌ (19 ಮತ್ತು 28ನೇ ನಿಮಿಷ) ಎರಡು ಗೋಲು ಬಾರಿಸಿದರು. ಯೋಗೇಶ್‌ (21), ಸ್ಟೀವ್ (31) ಮತ್ತು ಸ್ವಾಮಿ (48) ತಲಾ ಒಮ್ಮೆ ಚೆಂಡನ್ನು ಗುರಿ ತಲುಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.