‘ಚಿನ್ನದ ಬೂಟು’ ಮೆಸ್ಸಿ ಪಾಲು ಬಾರ್ಸಿಲೋನಾ: ಸತತ ಮೂರನೇ ವರ್ಷ ಯುರೋಪ್‌ನ ‘ಚಿನ್ನದ ಬೂಟು’ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿ ಲಯೊನೆಲ್‌ ಮೆಸ್ಸಿ ಪಾಲಾಗಲಿದೆ. ಬಾರ್ಸಿಲೋನಾ ಪರ ಈ ಬಾರಿ ಮೆಸ್ಸಿ ಒಟ್ಟು 36 ಗೋಲುಗಳನ್ನು ಬಾರಿಸಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಕಿಲಿಯನ್‌ ಬಾಪೆ 33 ಗೋಲುಗಳ ಒಡೆಯರಾದರು. ಯುರೋಪ್‌ನ ಪ್ರಮುಖ ಲೀಗ್‌ ತಂಡಗಳಲ್ಲಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಿಗೆ ಈ ಗೌರವ ನೀಡಲಾಗುತ್ತದೆ. ಪ್ಯಾರಿಸ್‌ ಸೈಂಟ್‌ ಜರ್ಮನ್‌ ತಂಡದ‍ಪರ ಆಡುವ ಬಾಪೆ ಅವರು ಅಂತಿಮ ಲೀಗ್‌ ಪಂದ್ಯದಲ್ಲಿ ಕೇವಲ ಒಂದು ಗೋಲು ಮಾತ್ರ ಗಳಿಸಿದರು. ನಾಲ್ಕು ಗೋಲು ಗಳಿಸಿದ್ದರೆಅವರು ಮೆಸ್ಸಿಯನ್ನು ಹಿಂದಿಕ್ಕಬಹುದಾಗಿತ್ತು. ಮೆಸ್ಸಿ ದಾಖಲಿಸಿದ ಗೋಲುಗಳ ಗೊಂಚಲು ಹೋದ ತಿಂಗಳು ಬಾರ್ಸಿಲೋನಾ ತಂಡವು ಲಾ ಲಿಗಾ ಟೂರ್ನಿಯನ್ನು ಜಯಿಸಲು ನೆರವಾಗಿತ್ತು. ‘ಚಿನ್ನದ ಬೂಟು’ ಗೌರವಕ್ಕೆ ಪಾತ್ರವಾಗಿರುವ ಕುರಿತು ಮಾತನಾಡಿರುವ ಮೆಸ್ಸಿ ‘ನಮ್ಮ ತಂಡವು ಚಾಂಪಿಯನ್ಸ್‌ ಲೀಗ್‌ನಲ್ಲಿ ಲಿವರ್‌ಪೂಲ್‌ ತಂಡದಿಂದ ಎಲಿಮಿನೇಟ್‌ ಆಗಿರುವ ಚಿಂತೆಯಿಂದ ಹೊರಬರಬೇಕಿದೆ, ವೈಯಕ್ತಿಕ ಪ್ರಶಸ್ತಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.