ಚೆನ್ನೈ ಓಪನ್‌: ಬೊಶಾಡ್‌ ಶುಭಾರಂಭ ಚೆನ್ನೈ: ಕೆನಡಾದ ಯೂಜಿನಿ ಬೊಶಾಡ್‌, ಚೆನ್ನೈ ಓಪನ್‌ ಡಬ್ಲ್ಯುಟಿಎ–250 ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 7–5, 6–2 ರಲ್ಲಿ ಸ್ವಿಟ್ಜರ್‌ಲೆಂಡ್‌ನ ಯೊವಾನ್ ಜುಗೆರ್‌ ವಿರುದ್ಧ ಗೆದ್ದರು. 28 ವರ್ಷದ ಬೊಶಾಡ್‌ ಈ ಹಿಂದೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದರು. ಗಾಯದ ಕಾರಣದಿಂದಾಗಿ ಅವರು ಒಂದೂವರೆ ವರ್ಷ ಅಂಗಳದಿಂದ ದೂರವುಳಿದಿದ್ದರು. 2021ರ ಮಾರ್ಚ್‌ನಲ್ಲಿ ಕೊನೆಯ ಡಬ್ಲ್ಯಟಿಎ ಟೂರ್ನಿ ಆಡಿದ್ದರು. ಮೊದಲ ಸೆಟ್‌ನಲ್ಲಿ 4–1 ರಲ್ಲಿ ಮುನ್ನಡೆಯಲ್ಲಿದ್ದ ಕೆನಡಾ ಆಟಗಾರ್ತಿ ಆ ಬಳಿಕ ಸ್ವಯಂಕೃತ ತಪ್ಪುಗಳನ್ನು ಮಾಡಿ ಎದುರಾಳಿಗೆ ಮರುಹೋರಾಟ ನಡೆಸಲು ಅವಕಾಶ ನೀಡಿದರು. ಆದರೂ ಒತ್ತಡವನ್ನು ನಿಭಾಯಿಸಿ ಸೆಟ್‌ ಗೆದ್ದರು. ಎರಡನೇ ಸೆಟ್‌ನಲ್ಲಿ ಅವರಿಗೆ ಸ್ವಿಸ್‌ ಆಟಗಾರ್ತಿಯಿಂದ ಹೆಚ್ಚಿನ ಪ್ರತಿರೋಧ ಎದುರಾಗಲಿಲ್ಲ. ಇನ್ನೊಂದು ಪಂದ್ಯದಲ್ಲಿ ಪೋಲೆಂಡ್‌ನ ಕ್ಯಾಥರಿನಾ ಕವಾ 6–4, 6–3 ರಲ್ಲಿ ಆಸ್ಟ್ರೇಲಿಯಾದ ಅಸ್ತ್ರಾ ಶರ್ಮಾ ಅವರನ್ನು ಮಣಿಸಿದರು. ಜಪಾನ್‌ನ ನವೊ ಹಿಬಿನೊ 6–0, 6–4 ರಲ್ಲಿ ಯಾನಾ ಫೆಟ್ ವಿರುದ್ಧ ಜಯಿಸಿದರು. ಕೆನಡಾದ ರೆಬೆಕಾ ಮರಿನೊ 7–5, 6–2 ರಲ್ಲಿ ರಷ್ಯಾದ ಅನಾ ಬ್ಲಿಕ್‌ನೊವಾ ಎದುರು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.