ಎರಡನೇ ಸುತ್ತಿಗೆ ಕರ್ಮನ್‌ ಕೌರ್‌ ಚೆನ್ನೈ: ಎಂಟನೇ ಶ್ರೇಯಾಂಕದ ಕ್ಲೊಯ್ ಪಕೆಟ್‌ ಅವರಿಗೆ ಆಘಾತ ನೀಡಿದ ಭಾರತದ ಕರ್ಮನ್‌ ಕೌರ್ ಥಂಡಿ, ಚೆನ್ನೈ ಓಪನ್‌ ಡಬ್ಲ್ಯುಟಿಎ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿಗೆ ಕಾಲಿಟ್ಟರು. ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿಸೋಮವಾರ ಕರ್ಮನ್‌4-6 6-4 6-3ರಿಂದ ಫ್ರಾನ್ಸ್‌ನ ಕ್ಲೊಯ್ ಅವರನ್ನು ಮಣಿಸಿದರು. ಇದರೊಂದಿಗೆ ತಮ್ಮ ವೃತ್ತಿಜೀವನದ ಶ್ರೇಷ್ಠ ಗೆಲುವು ದಾಖಲಿಸಿದರು. ಜಿದ್ದಾಜಿದ್ದಿನ ಪಂದ್ಯದಲ್ಲಿ ಮೊದಲ ಸೆಟ್‌ ಕೈಚೆಲ್ಲಿದ ಬಳಿಕ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ವೇಗದ ಸರ್ವ್‌ಗಳನ್ನು ಪ್ರಯೋಗಿಸುವ ಮೂಲಕ ವಿಶ್ವ ರ‍್ಯಾಂಕಿಂಗ್‌ನಲ್ಲಿ 109ನೇ ಸ್ಥಾನದಲ್ಲಿರುವ ಆಟಗಾರ್ತಿಯನ್ನು ಕಂಗೆಡಿಸಿದರು. ಮೂರನೇ ಸೆಟ್‌ನಲ್ಲಿ ಮತ್ತಷ್ಟು ಚುರುಕಿನ ಆಟದ ಮೂಲಕ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ‘ಇದು ಖಂಡಿತವಾಗಿಯೂ ದೊಡ್ಡ ಜಯ. ಮೊದಲ ಸೆಟ್‌ ಸೋತರೂ ಪುಟಿದೇಳುವ ವಿಶ್ವಾಸ ಇತ್ತು. ತವರಿನ ಅಭಿಮಾನಿಗಳ ಬೆಂಬಲವೂ ಬಹಳಷ್ಟಿತ್ತು‘ ಎಂದು ಪಂದ್ಯದ ಬಳಿಕಕರ್ಮನ್ ಪ್ರತಿಕ್ರಿಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.