ಚೆನ್ನೈ ಓಪನ್‌: ಕ್ವಾರ್ಟರ್‌ ಫೈನಲ್‌ಗೆ ಲಿನೆಟ್, ಸ್ವಾನ್ ಚೆನ್ನೈ : ಪೋಲೆಂಡ್‌ನ ಮಾಗ್ಡಾ ಲಿನೆಟ್‌ ಮತ್ತು ಬ್ರಿಟನ್‌ನ ಕೇಟಿ ಸ್ವಾನ್‌ ಅವರು ಡಬ್ಲ್ಯುಟಿಎ ಚೆನ್ನೈ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಲಿನೆಟ್‌ 6–2, 6–0 ರಲ್ಲಿ ರಷ್ಯಾದ ಒಕ್ಸಾನಾ ಸೆಲೆಖ್ಮೆತೇವಾ ಅವರನ್ನು ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಸ್ವಾನ್‌ 7–6, 6–2 ರಲ್ಲಿ ಅನಸ್ತೇಸಿಯಾ ಗಸನೊವಾ ವಿರುದ್ಧ ಗೆದ್ದರು. ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ತತಿಯಾನಾ ಮರಿಯಾ ಅವರು ಆಘಾತ ಅನುಭವಿಸಿದರು. ಅರ್ಜೆಂಟೀನಾದ ನಡಿಯಾ ಪೊದೊರೊಸ್ಕ 3–6, 6–2, 7–6 ರಲ್ಲಿ ತತಿಯಾನಾ ಎದುರು ಜಯಿಸಿದರು. ಈ ಪಂದ್ಯ ಎರಡು ಗಂಟೆ 46 ನಿಮಿಷ ನಡೆಯಿತು. ಎಂಟರಘಟ್ಟದ ಪಂದ್ಯದಲ್ಲಿ ಸ್ವಾನ್‌ ಅವರು ಜಪಾನ್‌ನ ನವೊ ಹಿಬಿನೊ ವಿರುದ್ಧ; ಪೊದೊರೊಸ್ಕ ಅವರು ಕೆನಡಾದ ಯೂಜಿನ್‌ ಬೊಶಾಡ್‌ ವಿರುದ್ಧ ಸೆಣಸಾಡುವರು. ಡಬಲ್ಸ್‌ನಲ್ಲಿ ಭಾರತದ ರುತುಜಾ ಭೋಸ್ಲೆ ಮತ್ತು ಕರ್ಮನ್‌ ಕೌರ್‌ ಜೋಡಿ 0–6, 3–6 ರಲ್ಲಿ ಕೆನಡಾದ ಗ್ಯಾಬ್ರಿಯೆಲಾ ದಬ್ರೊವ್‌ಸ್ಕಿ– ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಎದುರು ಪರಾಭವಗೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.