ಟೆನಿಸ್‌ ಟೂರ್ನಿ: ಜೀವನ್‌– ಬಾಲಾಜಿ ರನ್ನರ್ಸ್‌ ಅಪ್ ಪುಣೆ (ಪಿಟಿಐ): ಭಾರತದ ಎನ್‌.ಶ್ರೀರಾಂ ಬಾಲಾಜಿ ಮತ್ತು ಜೀವನ್‌ ನೆಡುಂಚೆಳಿಯನ್‌ ಅವರು ಇಲ್ಲಿ ಕೊನೆಗೊಂಡ ಟಾಟಾ ಓಪನ್‌ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಸೋತು ರನ್ನರ್ಸ್‌ ಅಪ್ ಆದರು. ಶನಿವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿಯನ್ನು 6–4, 6–4 ರಿಂದ ಮಣಿಸಿದ ಬೆಲ್ಜಿಯಂನ ಸ್ಯಾಂದೆರ್‌ ಜಿಲ್ ಮತ್ತು ಯೋರಾನ್ ವ್ಲೀಗೆನ್‌ ಅವರು ಕಿರೀಟ ಮುಡಿಗೇರಿಸಿಕೊಂಡರು. ಇದೇ ಮೊದಲ ಬಾರಿ ಎಟಿಪಿ ಟೂರ್‌ ಫೈನಲ್‌ನಲ್ಲಿ ಆಡಿದ ಬಾಲಾಜಿ ಅವರು ಉತ್ತಮ ಸರ್ವ್‌ ಮತ್ತು ಆಕರ್ಷಕ ರಿಟರ್ನ್‌ಗಳ ಮೂಲಕ ಗಮನ ಸೆಳೆದರು. ಆದರೆ ಎದುರಾಳಿ ಜೋಡಿಯನ್ನು ಮಣಿಸಲು ಅದು ಸಾಕಾಗಲಿಲ್ಲ. ಈ ಪಂದ್ಯ ಒಂದು ಗಂಟೆ 10 ನಿಮಿಷ ನಡೆಯಿತು. ಜಿಲ್‌ ಮತ್ತು ವ್ಲೀಗೆನ್‌ ಅವರು ಎಟಿಪಿ ವಿಶ್ವ ಟೂರ್‌ನಲ್ಲಿ ಗೆದ್ದ ಆರನೇ ಪ್ರಶಸ್ತಿ ಇದು. 2021ರ ಸಿಂಗಪುರ ಓಪನ್‌ ಬಳಿಕ ಅವರು ಗೆದ್ದ ಮೊದಲ ಟ್ರೋಫಿ ಇದಾಗಿದೆ. ಮೊದಲ ಸೆಟ್‌ನ ಮೂರನೇ ಗೇಮ್‌ನಲ್ಲಿ ಜೀವನ್‌ ಅವರ ಸರ್ವ್‌ ಬ್ರೇಕ್‌ ಮಾಡಿದ ಬೆಲ್ಜಿಯಂನ ಜೋಡಿ ಮೇಲುಗೈ ಪಡೆಯಿತು. ತಮ್ಮ ಎಲ್ಲ ಸರ್ವ್‌ಗಳಲ್ಲೂ ಪಾಯಿಂಟ್ಸ್ ಗಳಿಸಿ ಸೆಟ್‌ ಗೆದ್ದಿತು. ಎರಡನೇ ಸೆಟ್‌ನ ಮೂರನೇ ಗೇಮ್‌ನಲ್ಲಿ ಬಾಲಾಜಿ ಅವರ ಸರ್ವ್‌ ಬ್ರೇಕ್‌ ಮಾಡಿ ನಿರ್ಣಾಯಕ ಮುನ್ನಡೆ ಗಳಿಸಿತು. ಆ ಬಳಿಕ ಬಾಲಾಜಿ ಮತ್ತು ಜೀವನ್‌ಗೆ ಮರುಹೋರಾಟ ನಡೆಸಲು ಆಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.