ಸುನಿಲ್‌ ಚೆಟ್ರಿಗೆ ಭುಟಿಯಾ ಅಭಿನಂದನೆ ನವದೆಹಲಿ (ಪಿಟಿಐ): ದೇಶದ ಪರ ಗರಿಷ್ಠ ಪಂದ್ಯವಾಡಿ, ತಮ್ಮ ದಾಖಲೆ ಮುರಿದಿರುವ ಭಾರತ ಫುಟ್‌ಬಾಲ್‌ ತಂಡದ ಹಾಲಿ ನಾಯಕ ಸುನಿಲ್‌ ಚೆಟ್ರಿ ಅವರನ್ನು ಈ ಹಿಂದೆ ತಂಡದ ನಾಯಕರಾಗಿದ್ದ ಭೈಚುಂಗ್‌ ಭುಟಿಯಾ ಅಭಿನಂದಿಸಿದರು. ಚೆಟ್ರಿ ಅವರು ಬುಧವಾರ 108ನೇ ಪಂದ್ಯವಾಡಿದ್ದರು.ಆ ಮೂಲಕ ಭುಟಿಯಾ ಆಡಿದ್ದ 107 ಪಂದ್ಯಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಕಿಂಗ್ಸ್‌ ಕಪ್‌ ಟೂರ್ನಿಯಲ್ಲಿ ಕ್ಯುರಸೊವ್‌ ವಿರುದ್ಧ ನಡೆದ ಈ ಪಂದ್ಯದಲ್ಲಿ ಭಾರತ 1–3 ಗೋಲುಗಳಿಂದ ಸೋತಿತ್ತು. ಭುಟಿಯಾ 31ನೇ ನಿಮಿಷದಲ್ಲಿ ತಂಡದ ಪರ ಏಕೈಕ ಗೋಲು ಹೊಡೆದಿದ್ದರು. ‘ಸುನಿಲ್‌ ಕುರಿತು ಹೆಮ್ಮೆಯಾಗುತ್ತಿದೆ. ಅವರಿಗೆ ಅಭಿನಂದನೆಗಳು.ಅವರು ತಂಡದ ಉತ್ತಮ ನಾಯಕ ಹಾಗೂ ಆಟಗಾರ. ಸುನಿಲ್‌ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸವಿದೆ. ಯಶಸ್ಸು ಸಾಧಿಸಬೇಕೆಂಬ ಹಸಿವು ಅವರನ್ನು ವಿಶೇಷ ವ್ಯಕ್ತಿಯನ್ನಾಗಿಸಿದೆ’ ಎಂದು ಭುಟಿಯಾ ಹೇಳಿದ್ದಾರೆ. ‘ಚೆಟ್ರಿ ಅವರ ಫಿಟ್‌ನೆಸ್‌ ಮಟ್ಟವು ಅವರನ್ನು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಬಹಳ ದಿನ ಉಳಿಯುವಂತೆ ಮಾಡುತ್ತದೆ’ ಎಂದು ಭುಟಿಯಾ ನುಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.