ಆಸ್ಟ್ರೇಲಿಯಾ ಓಪನ್‌ಗೆ ನೊವಾಕ್: ಟಾಡ್ ಸಂತಸ ಬೆಂಗಳೂರು: ಒಂದು ವರ್ಷದ ಹಿಂದೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡಬೇಕಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್‌ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿ ವಿವಾದಕ್ಕೊಳಗಾಗಿದ್ದರು. ಅದರಿಂದಾಗಿ ಅವರು ಟೂರ್ನಿಯಿಂದಲೇ ಸರಿಯಬೇಕಾಯಿತು. ಆದರೆ ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿ ನಡೆಯಲಿದೆ. ಅದರಲ್ಲಿ ನೊವಾಕ್ ಆಡುವುದು ಬಹುತೇಕ ಖಚಿತವಾಗಿದೆ. ಆಸ್ಟ್ರೇಲಿಯಾದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸರ್ಕಾರವು ನಿಯಮ ಸಡಿಲಗೊಳಿಸಿದೆ. ‘ನೋವಾಕ್ ಆಡುವುದರಿಂದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಕಳೆಯು ಮರುಕಳಿಸಲಿದೆ. ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ’ ಎಂದು ಮಾಜಿ ಆಟಗಾರ ಟಾಡ್ ವುಡ್‌ಬ್ರಿಡ್ಜ್ ಹೇಳಿದ್ದಾರೆ. 16 ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಟಾಡ್ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. ಬುಧವಾರ ಸೋನಿ ನೆಟ್‌ವರ್ಕ್‌ ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಟಾಡ್ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಇಲ್ಲಿ ಜಯಗಳಿಸಲು ನೊವಾಕ್ ಸಕಲಸಿದ್ಧತೆ ಮಾಡಿಕೊಂಡಿದ್ದಾರೆ. ಹೋದ ಬಾರಿ ಅವರಿಗೆ ಇಲ್ಲಿ ಆಡಲು ಅನುಮತಿ ಲಭಿಸಲಿಲ್ಲ. ಅವರು ರಫಾ ನಡಾಲ್ ಅವರ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲುವಿನ ದಾಖಲೆಯನ್ನು ಮೀರಿ ನಿಲ್ಲುವ ಛಲದಲ್ಲಿದ್ದಾರೆ. ಆದ್ದರಿಂದ ಅವರ ಆಟ ರಂಗೇರಲಿದೆ’ ಎಂದರು. ರೋಜರ್ ಫೆಡರರ್ ಅವರ ನಿವೃತ್ತಿಯ ನಂತರ ನಡೆಯುತ್ತಿರುವ ಟೂರ್ನಿ ಇದಾಗಿದೆ. ‘ಅಮೆರಿಕ ಓಪನ್ ಟೆನಿಸ್‌ನಲ್ಲಿ ಆಡಿದ್ದ ಕೆಲವು ಯುವ ಆಟಗಾರರು ಗಮನ ಸೆಳೆದಿದ್ದಾರೆ. ಕಾರ್ಲೋಸ್ ಅಲ್ಕರಾಜ್ ಅವರು ಉತ್ತಮ ಆಟಗಾರ’ ಎಂದು ಟಾಡ್ ಶ್ಲಾಘಿಸಿದ್ದಾರೆ. ಜನವರಿ 16ರಿಂದ ಟೂರ್ನಿ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.