ಬೆಂಗಳೂರು ಓಪನ್ ಟೆನಿಸ್ ಟೂರ್ನಿ: ಆಸ್ಟ್ರೇಲಿಯಾದ ಮ್ಯಾಕ್ಸ್ ಚಾಂಪಿಯನ್ ಬೆಂಗಳೂರು: ವೇಗ, ಆಕ್ರಮಣ ಮತ್ತು ಚಾಕಚಕ್ಯತೆಯ ಆಟವಾಡಿ ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ರೋಮಾಂಚನ‌ ಉಂಟುಮಾಡಿದ ಆಸ್ಟ್ರೇಲಿಯಾದ ಮ್ಯಾಕ್ಸ್‌ ಪರ್ಸೆಲ್‌ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ಭಾನುವಾರ ನಡೆದ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಪರ್ಸೆಲ್‌ 3-6, 7-5, 7-6 (7-5) ರಲ್ಲಿ ತಮ್ಮದೇ ದೇಶದ ಜೇಮ್ಸ್‌ ಡಕ್ವರ್ಥ್‌ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಸೋತು ಎರಡನೇ ಸೆಟ್‌ನಲ್ಲಿ 1–3 ರಲ್ಲಿ ಹಿನ್ನಡೆಯಲ್ಲಿದ್ದ 24 ವರ್ಷದ ಪರ್ಸೆಲ್‌, ಆ ಬಳಿಕ ಅಮೋಘವಾಗಿ ಮರುಹೋರಾಟ ನಡೆಸಿ ಟ್ರೋಫಿಗೆ ಮುತ್ತಿಕ್ಕಿದರು. ಈ ಜಿದ್ದಾಜಿದ್ದಿನ ಹೋರಾಟ ಎರಡು ಗಂಟೆ 49 ನಿಮಿಷ ನಡೆಯಿತು. ಕಳೆದ ವಾರ ನಡೆದಿದ್ದ ಚೆನ್ನೈ ಓಪನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಪರ್ಸೆಲ್‌, ತಮ್ಮ ಭಾರತ ಪ್ರವಾಸವನ್ನು ಸ್ಮರಣೀಯವನ್ನಾಗಿಸಿಕೊಂಡರು. ಚೆನ್ನೈನಲ್ಲೂ ಅವರು ಮೊದಲ ಸೆಟ್‌ ಸೋತು, ಆ ಬಳಿಕ ಪುಟಿದೆದ್ದು ನಿಂತಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 155ನೇ ಸ್ಥಾನದಲ್ಲಿರುವ ಪರ್ಸೆಲ್‌, ಫೈನಲ್‌ನಲ್ಲಿ ಲಯ ಕಂಡುಕೊಳ್ಳಲು ಅಲ್ಪ ಸಮಯ ತೆಗೆದುಕೊಂಡರು. ಇಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಡಕ್ವರ್ಥ್‌ ಮೊದಲ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 3–1 ರಲ್ಲಿ ಮೇಲುಗೈ ಸಾಧಿಸಿದರು. ಆ ಬಳಿಕ ತಮ್ಮ ಸರ್ವ್‌ಗಳಲ್ಲಿ ಪಾಯಿಂಟ್‌ ಗಳಿಸಿ ಸೆಟ್‌ ಗೆದ್ದರು. ವಿಶ್ವದ 128ನೇ ರ್‍ಯಾಂಕ್‌ನ ಆಟಗಾರ ಡಕ್ವರ್ಥ್‌ ಎರಡನೇ ಸೆಟ್‌ನ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿದರು. ಆದರೆ ಆರನೇ ಗೇಮ್‌ನಲ್ಲಿ ಡಕ್ವರ್ಥ್‌ ಅವರ ಸರ್ವ್‌ ಬ್ರೇಕ್‌ ಮಾಡಿದ ಪರ್ಸೆಲ್‌, 3–3 ರಲ್ಲಿ ಸಮಬಲ ಸಾಧಿಸಿದರು. ಅಲ್ಲಿಂದ ಮುಂದೆ ಪರ್ಸೆಲ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿದ ರೀತಿ ಸೊಗಸಾಗಿತ್ತು. ಮೂರನೇ ಸೆಟ್‌ನಲ್ಲಿ ಇಬ್ಬರೂ ಪಟ್ಟು ಬಿಡದೆ ಹೋರಾಡಿದ್ದರಿಂದ 6-6ರಲ್ಲಿ ಸಮಬಲ ಕಂಡುಬಂತು. ಇದರಿಂದ ವಿಜೇತರನ್ನು ನಿರ್ಣಯಿಸಲು ಟೈ ಬ್ರೇಕರ್‌ ಮೊರೆಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಚುರುಕಿನ ಆಟವಾಡಿದ ಪರ್ಸೆಲ್‌ 4–1 ರಲ್ಲಿ ಮುನ್ನಡೆ ಪಡೆದು ಎದುರಾಳಿಯ ಮೇಲೆ ಒತ್ತಡ ಹೇರಿದರು. ಡಕ್ವರ್ಥ್‌ ತಿರುಗೇಟು ನೀಡಲು ಪ್ರಯತ್ನಿಸಿದರಾದರೂ, ಅದಕ್ಕೆ ಅವಕಾಶ ನೀಡದೆ ಪಂದ್ಯ ಗೆದ್ದು ಸಂಭ್ರಮಿಸಿದರು. ಡಕ್ವರ್ಥ್ ಅವರು 15 ಏಸ್‌ಗಳನ್ನು ಸಿಡಿಸಿದರೂ, ಆರು ಸಲ ಡಬಲ್‌ ಫಾಲ್ಟ್ಸ್‌ ಮಾಡಿದ್ದು ಹಿನ್ನಡೆ ಉಂಟುಮಾಡಿತು. ಕೆಲವೊಂದು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಮತ್ತೊಂದೆಡೆ ಪರ್ಸೆಲ್‌ ಅವರು ರಿಟರ್ನ್‌ಗಳು ಮತ್ತು ನೆಟ್‌ ಬಳಿಯ ಆಟದಲ್ಲಿ ನಿಖರತೆ ತೋರಿದರು. ಪರ್ಸೆಲ್‌ಗೆ ಬೆಂಬಲ: ಆಸ್ಟ್ರೇಲಿಯಾದ ಸಿಡ್ನಿಯ ಇಬ್ಬರು ಗೆಳೆಯರ ನಡುವಿನ ಹೋರಾಟವನ್ನು ಬೆಂಗಳೂರಿನ ನೂರಾರು ಟೆನಿಸ್‌ ಪ್ರೇಮಿಗಳು ಕಣ್ತುಂಬಿಕೊಂಡರು. ಫೈನಲ್‌ ಪಂದ್ಯದಲ್ಲಿ ಪ್ರೇಕ್ಷಕರ ಬೆಂಬಲವು, ಟೂರ್ನಿಯುದ್ದಕ್ಕೂ ಶಾಂತಚಿತ್ತ ಆಟದಿಂದ ಅಭಿಮಾನಿಗಳ ಮನಗೆದ್ದಿದ್ದ ಪರ್ಸೆಲ್‌ ಅವರ ಪರವಾಗಿತ್ತು. ಕೆಲವರು ಡಕ್ವರ್ಥ್‌ ಆಟಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.