ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಅರ್ಹತಾ ಸುತ್ತು- ಚೌಧರಿಗೆ ಗೆಲುವು ಬೆಂಗಳೂರು: ಭಾರತದ ವೈದೇಹಿ ಚೌಧರಿ ಅವರು ಇಲ್ಲಿ ಆರಂಭವಾದ ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಅರ್ಹತಾ ಹಂತದ ಎರಡನೇ ಸುತ್ತು ಪ್ರವೇಶಿಸಿದರು. ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವೈದೇಹಿ 6–2, 6–0 ರಲ್ಲಿ ಜಪಾನ್‌ನ ಜುನ್ರಿ ನಮಗಟ ಎದುರು ಗೆದ್ದರು. ಅರ್ಹತಾ ಹಂತದಲ್ಲಿ ಒಂಬತ್ತನೇ ಶ್ರೇಯಾಂಕ ಪಡೆದಿರುವ ವೈದೇಹಿ ಮೊದಲ ಸೆಟ್‌ನಲ್ಲಿ ಎರಡು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಅವರು ಎದುರಾಳಿಗೆ ಯಾವುದೇ ಗೇಮ್‌ ಬಿಟ್ಟುಕೊಡಲಿಲ್ಲ. ಸೋಮವಾರ ನಡೆಯಲಿರುವ ಎರಡನೇ ಸುತ್ತಿನಲ್ಲಿ ಗೆದ್ದರೆ ಅವರು ಪ್ರಧಾನ ಹಂತ ಪ್ರವೇಶಿಸುವರು. ಅರ್ಹತಾ ಹಂತದಲ್ಲಿ ಕಣದಲ್ಲಿದ್ದ ಭಾರತದ ಇತರ ಎಲ್ಲ ಆಟಗಾರ್ತಿಯರು ಮೊದಲ ಸುತ್ತಿನಲ್ಲೇ ಎಡವಿದರು. ಹುಮೇರಾ ಬಹಾರ್ಮಸ್ 3–6, 3–6 ರಲ್ಲಿ ಚೀನಾ ತೈಪೆಯ ಲೀ ಪೆ ಚಿ ವಿರುದ್ಧ; ಪ್ರತಿಭಾ ನಾರಾಯಣ ಪ್ರಸಾದ್ 2–6, 1–6 ರಲ್ಲಿ ಥಾಯ್ಲೆಂಡ್‌ನ ಅಂಚಿಸ ಚಂತಾ ಎದುರು; ಬಿ.ರಷ್ಮಿಕಾ 1–6, 3–6 ರಲ್ಲಿ ಸ್ವೀಡನ್‌ನ ಜಾಕ್ವೆಲಿನ್‌ ಅವಾದ್ ವಿರುದ್ಧ; ಕಶಿಶ್‌ ಭಾಟಿಯಾ 4–6, 3–6 ರಲ್ಲಿ ಎಮಿಲಿ ವಾಕರ್‌ ವಿರುದ್ಧ; ಸೋಹಾ ಸಾದಿಕ್‌ 5–7, 1–6 ರಲ್ಲಿ ಪುನಿನ್‌ ಕೊವಪಿಟುಟೆಡ್‌ ವಿರುದ್ಧ ಪರಾಭವಗೊಂಡರು. ಅರ್ಹತಾ ಹಂತದಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಜಪಾನ್‌ನ ಹಿರೊಕೊ ಕುವಾಟ ಆಘಾತ ಅನುಭವಿಸಿದರು. ಜರ್ಮನಿಯ ಸಾರಾ ರೆಬೆಕಾ 6–2, 6–0 ರಲ್ಲಿ ಹಿರೊಕೊ ಅವರನ್ನು ಮಣಿಸಿದರು. ಪ್ರಧಾನ ಹಂತದ ಪಂದ್ಯಗಳು ಮಂಗಳವಾರ ಆರಂಭವಾಗಲಿದ್ದು ಭಾರತದ ಕರ್ಮನ್‌ ಕೌರ್ ಥಂಡಿ, ಅಂಕಿತಾ ರೈನಾ ಮತ್ತು ಜೆಕ್ ಗಣರಾಜ್ಯದ ಬ್ರೆಂಡಾ ಫ್ರುವಿರ್ತೊವಾ ಕಣಕ್ಕಿಳಿಯಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.