ಸುಮಿತ್‌ ನಗಾಲ್‌ ಸವಾಲು ಅಂತ್ಯ ಬೆಂಗಳೂರು: ರ್‍ಯಾಂಕಿಂಗ್‌ನಲ್ಲಿ ತನಗಿಂತ ಮೇಲಿನ ಕ್ರಮಾಂಕದಲ್ಲಿರುವ ಆಟಗಾರನಿಗೆ ತಕ್ಕ ಪೈಪೋಟಿ ಒಡ್ಡಿದರೂ ಸುಮಿತ್‌ ನಗಾಲ್‌ಗೆ ಗೆಲುವು ದಕ್ಕಲಿಲ್ಲ. ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್‌ 4–6, 6–3, 6–3 ರಲ್ಲಿ ನಗಾಲ್‌ ವಿರುದ್ಧ ಗೆದ್ದು ಎಂಟರಘಟ್ಟ ಪ್ರವೇಶಿಸಿದರು. ಇದರೊಂದಿಗೆ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಸವಾಲಿಗೆ ತೆರೆಬಿತ್ತು. ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಗುರುವಾರ ನಡೆದ ಪಂದ್ಯ ರೋಚಕತೆಯಿಂದ ಕೂಡಿತ್ತು. ಮೊದಲ ಸೆಟ್‌ ಸೋತರೂ, 155 ರ‍್ಯಾಂಕ್‌ನ ಆಟಗಾರ ಪರ್ಸೆಲ್‌ ಅಮೋಘ ಆಟವಾಡಿ ಪುಟಿದೆದ್ದು ನಿಂತರು. ಈ ಹೋರಾಟ ಎರಡು ಗಂಟೆ ಐದು ನಿಮಿಷ ನಡೆಯಿತು. ಮೊದಲ ಸೆಟ್‌ನ ಏಳನೇ ಗೇಮ್‌ನಲ್ಲಿ ನಗಾಲ್, ಎದುರಾಳಿಯ ಸರ್ವ್‌ ಬ್ರೇಕ್ ಮಾಡಿ ಮುನ್ನಡೆ ಪಡೆದರು. ಎಟಿಪಿ ರ‍್ಯಾಂಕಿಂಗ್‌ನಲ್ಲಿ 409ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಆ ಬಳಿಕ ಮುಂದಿನ ಎರಡೂ ಸರ್ವ್‌ಗಳಲ್ಲಿ ಪಾಯಿಂಟ್ಸ್‌ ಗಳಿಸಿ ಸೆಟ್‌ ಗೆದ್ದರು. ಎರಡನೇ ಸೆಟ್‌ನಲ್ಲಿ ಮೊದಲ ಏಳು ಗೇಮ್‌ಗಳವರೆಗೆ ಯಾವುದೇ ಸರ್ವಿಸ್‌ ಬ್ರೇಕ್ ಆಗಲಿಲ್ಲ. ಆದರೆ ಎಂಟನೇ ಗೇಮ್‌ನಲ್ಲಿ ನಗಾಲ್ ಸರ್ವ್ ಬ್ರೇಕ್ ಮಾಡಿದ ಪರ್ಸೆಲ್, 5-3 ರಲ್ಲಿ ಮುನ್ನಡೆ ಗಳಿಸಿದರು. ಆ ಬಳಿಕ ತಮ್ಮ ಸರ್ವ್ ಕಾಪಾಡಿಕೊಂಡು ಸೆಟ್ ಗೆದ್ದು ಪಂದ್ಯವನ್ನು ಸಮಸ್ಥಿತಿಗೆ ತಂದರು. ನಿರ್ಣಾಯಕ ಸೆಟ್‌ನಲ್ಲಿ 3-3ರ ಸಮಬಲ ಕಂಡುಬಂತು. ಆಸ್ಟ್ರೇಲಿಯಾದ ಆಟಗಾರ ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ನಿರ್ಣಾಯಕ ಮುನ್ನಡೆ ಸಾಧಿಸಿದರು. ಒಂದು ಡಬಲ್‌ ಫಾಲ್ಟ್‌ ಮಾಡಿದ್ದು ನಗಾಲ್‌ಗೆ ಮುಳುವಾಗಿ ಪರಿಣಮಿಸಿತು. ಆ ಬಳಿಕ ಪರ್ಸೆಲ್‌ ಗೆಲುವಿನತ್ತ ಹೆಜ್ಜೆಯಿಟ್ಟರು. ಪಂದ್ಯದುದ್ದಕ್ಕೂ ಅವರ ಸರ್ವ್‌ಗಳು ಅತ್ಯುತ್ತಮವಾಗಿದ್ದವು. ಒಟ್ಟು 13 ಏಸ್‌ಗಳನ್ನು ಹೊಡೆದು ಎದುರಾಳಿಯನ್ನು ಕಂಗೆಡಿಸಿದರು. ನಗಾಲ್‌ ರ‍್ಯಾಕೆಟ್‌ನಿಂದ ಸಿಡಿದದ್ದು ಮೂರು ಏಸ್‌ಗಳು ಮಾತ್ರ. ದಿನದ ಇತರ 16ರ ಘಟ್ಟದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಜೇಮ್ಸ್‌ ಡಕ್ವರ್ಥ್‌ 6–1, 6–2 ರಲ್ಲಿ ಫ್ರಾನ್ಸ್‌ನ ಗಿಯೊವಾನಿ ಪೆರಿಕಾರ್ಡ್‌ ವಿರುದ್ಧ; ಬಲ್ಗೇರಿಯದ ದಿಮಿತರ್‌ ಕುಜ್ಮನೊವ್ 6–3, 6–4 ರಲ್ಲಿ ತಮ್ಮದೇ ದೇಶದ ಅಲಿಬೆಕ್ ಕಚಮಜೊವ್‌ ವಿರುದ್ದ; ಇಟಲಿಯ ಲುಕಾ ನಾರ್ಡಿ 7–5, 5–7, 6–2 ರಲ್ಲಿ ಚೀನಾ ತೈಪೆಯ ಜೇಸನ್‌ ಜಂಗ್‌ ವಿರುದ್ಧ ಗೆದ್ದರು. ಡಬಲ್ಸ್‌ ಸೆಮಿಗೆ ಅನಿರುದ್ಧ್‌–ವಿಜಯ್: ಭಾರತದ ಅನಿರುದ್ಧ್‌ ಚಂದ್ರಶೇಖರ್‌ ಮತ್ತು ಎನ್‌. ವಿಜಯ್‌ಸುಂದರ್‌ ಪ್ರಶಾಂತ್‌ ಅವರು ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಅವರು 3–6, 6–4, 12–10 ರಲ್ಲಿ ಬೆಂಜಮಿನ್‌ ಲಾಕ್‌– ಅಕಿರಾ ಸಂಟಿಲಾನ್‌ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಭಾರತದ ಅರ್ಜುನ್‌ ಖಾಡೆ ಮತ್ತು ಆಸ್ಟ್ರಿಯದ ಮ್ಯಾಕ್ಸಿಮಿಲಿಯನ್‌ ಜೋಡಿ 7–5, 6–3 ರಲ್ಲಿ ಫ್ರೆಡೆರಿಕೊ ಫೆರೆರಾ ಸಿಲ್ವಾ– ದಿಮಿತರ್‌ ಕುಜ್ಮನೊವ್‌ ಅವರನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.