ಐಎಸ್‌ಎಲ್‌: ಎಟಿಕೆಎಂಬಿ–ಗೋವಾ ಹಣಾಹಣಿ ಇಂದು ಮಡಗಾಂವ್‌: ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿರುವ ಎಟಿಕೆ ಮೋಹನ್ ಬಾಗನ್ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ. ಫಟೋರ್ಡಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ ಇದುವರೆಗೆ ಐದು ಪಂದ್ಯಗಳಿಂದ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವು 10 ಪಾಯಿಂಟ್‌ ಗಳಿಸಿ ಮೂರನೇ ಸ್ಥಾನದಲ್ಲಿದೆ. ಆತಿಥೇಯ ಗೋವಾ, ಎಂಟು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಟೂರ್ನಿಯ ಎರಡು ಬಲಿಷ್ಠ ತಂಡಗಳ ನಡುವಣ ಹಣಾಹಣಿ ಎಂದೇ ಈ ಪಂದ್ಯವು ಬಿಂಬಿತವಾಗಿದೆ. ವಿಭಿನ್ನ ತಂತ್ರಗಳನ್ನು ಹೆಣೆಯುವ ಎರಡೂ ತಂಡಗಳ ಕೋಚ್‌ಗಳು ಪಂದ್ಯದ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ತರಬೇತುದಾರ ಆಂಟೊನಿಯೊ ಹಬಾಸ್‌ ನೇತೃತ್ವದ ಎಟಿಕೆಎಂಬಿ ತಂಡ ಪ್ರತಿ ದಾಳಿ ಹಾಗೂ ಡಿಫೆಂಡಿಂಗ್ ವಿಭಾಗದಲ್ಲಿ ಹೆಚ್ಚು ಸಂಘಟಿತವಾಗಿದೆ. ಗೋವಾ ತಂಡವೂ ಜುವಾನ್ ಫೆರಾಂಡೊ ಮಾರ್ಗದರ್ಶನದಲ್ಲಿ ಪಳಗಿದೆ. ಎಟಿಕೆಂಬಿ ತಂಡದಲ್ಲಿ ಗಾಯದ ಸಮಸ್ಯೆ ಕಾಡುತ್ತಿದ್ದು, ಜೆವಿ ಹರ್ನಾಂಡೆಜ್‌ ಹಾಗೂ ತಿರಿ ಅವರು ಈ ಪಂದ್ಯದಲ್ಲಿ ಆಡುವುದು ಅನುಮಾನ. ಎಟಿಕೆಎಂಬಿ ತಂಡಕ್ಕೆ ಫಿಜಿ ಪ್ರತಿಭೆ ರಾಯ್‌ಕೃಷ್ಣ ಬಲವಿದ್ದರೆ, ಆತಿಥೇಯ ಗೋವಾ ತಂಡದ ಐಗೊರ್‌ ಅಂಗುಲೊ ಅದ್ಭುತ ಲಯದಲ್ಲಿದ್ದು ಕಾಲ್ಚಳಕ ತೋರುವ ತವಕದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.