2027ರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿ: ಬಿಡ್ ಸಲ್ಲಿಸಿದ ಭಾರತ ನವದೆಹಲಿ: 2027ರ ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯ ಆತಿಥ್ಯ ವಹಿಸಲು ನಾವು ಬಿಡ್‌ ಸಲ್ಲಿಸಿದ್ದು, ಇತರ ದೇಶಗಳಿಂದ ತೀವ್ರ ಪೈಪೋಟಿ ಎದುರಾಗಿದೆ. ಆದರೆ ಈ ಪೈಪೋಟಿ ಸಹಜ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಅಧ್ಯಕ್ಷ ಪ್ರಫುಲ್‌ ಪಟೇಲ್ ಹೇಳಿದ್ದಾರೆ. 2027ರ ಏಷ್ಯಾಕಪ್‌ ಟೂರ್ನಿಯನ್ನು ಆಯೋಜಿಸುವ ಪ್ರಕ್ರಿಯೆಯಾಗಿ ಬಿಡ್‌ ಪುಸ್ತಿಕೆಯನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರೊಂದಿಗೆ ಪ್ರಫುಲ್‌ ಪಟೇಲ್‌ ಬುಧವಾರ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಪ್ರಫುಲ್‌, 24 ತಂಡಗಳು ಸ್ಪರ್ಧಿಸುವ ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಎಐಎಫ್‌ಎಫ್‌ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಏಷ್ಯಾಕಪ್‌ ಟೂರ್ನಿಯನ್ನು ಆಯೋಜಿಸಲು ಪೈಪೋಟಿ ಜೋರಾಗಿದೆ. ಆದರೆ ಪ್ರಯತ್ನ ನಡೆಸದೆ ಯಾವುದೂ ಸಿಗುವುದಿಲ್ಲ. ಇತರ ದೇಶಗಳ ರೀತಿಯಲ್ಲಿ ನಮಗೂ ಆತಿಥ್ಯವನ್ನು ಪಡೆದುಕೊಳ್ಳುವ ವಿಶ್ವಾಸವಿದೆ. ರಾಜತಾಂತ್ರಿಕ ಬೆಂಬಲವೂ ಇದೆ. ಇದು ದೇಶದ ಬಿಡ್ ಆಗಿರುವುದರಿಂದ ಎಐಎಫ್‌ಎಫ್‌ ಇದಕ್ಕೆ ಪ್ರತಿನಿಧಿಯಾಗಿದೆ‘ ಎಂದು ಪಟೇಲ್ ನುಡಿದರು. ‘ನಾವು ಫಿಫಾ 17 ವರ್ಷದೊಳಗಿನ ಪುರುಷರ ವಿಶ್ವಕಪ್ ಟೂರ್ನಿ ಆಯೋಜಿಸಿದ್ದೆವು. 2022ರ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಹಾಗೂ 2022ರ ಎಎಫ್‌ಸಿ ಮಹಿಳಾ ಏಷ್ಯಾಕಪ್‌ ಟೂರ್ನಿಗಳಿಗೆ ಆತಿಥ್ಯ ವಹಿಸಲಿದ್ದೇವೆ. ಫುಟ್‌ಬಾಲ್ ಕ್ಷೇತ್ರದಲ್ಲಿ ಭಾರತ ವಿಶ್ವದ ಗಮನ ಸೆಳೆದಿದೆ‘ ಎಂದು ಪಟೇಲ್ ಹೇಳಿದರು. ಏಷ್ಯಾದ ಪ್ರಮುಖ ಫುಟ್‌ಬಾಲ್‌ ತಂಡಗಳಾದ ಸೌದಿ ಅರೇಬಿಯಾ ಹಾಗೂ ಇರಾನ್ ಹಾಗೂ 2022ರ ಫಿಫಾ ವಿಶ್ವಕಪ್ ಆಯೋಜನೆಡ ಮಾಡಲಿರುವ ಕತಾರ್ ಕೂಡ 2027ರ ಏಷ್ಯನ್ ಕಪ್ ಟೂರ್ನಿಗೆ ಬಿಡ್‌ ಸಲ್ಲಿಸಿವೆ. ಸೌದಿ ಅರೇಬಿಯಾ ಹಾಗೂ ಕತಾರ್ ಸೋಮವಾರವೇ ತಮ್ಮ ಬಿಡ್ ಪುಸ್ತಿಕೆಗಳನ್ನು ಏಷ್ಯನ್ ಫುಟ್‌ಬಾಲ್ ಕಾನ್ಫಡರೇಷನ್‌ಗೆ ಸಲ್ಲಿಸಿವೆ. ಭಾರತ ಗುರುವಾರ ಅಥವಾ ಕಡೆಯ ದಿನವಾದ ಶುಕ್ರವಾರ ಸಲ್ಲಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.