ಇಂಡಿಯನ್ ಸೂಪರ್ ಲೀಗ್‌: ಈಸ್ಟ್ ಬೆಂಗಾಲ್‌ಗೆ ‘ಇಂಜುರಿ’ ಬ್ಯಾಂಬೊಲಿಮ್: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಜಯದ ಸಂಭ್ರಮಕ್ಕೆ ಸಜ್ಜಾಗಿದ್ದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡಕ್ಕೆ ಇಂಜುರಿ ಅವಧಿಯಲ್ಲಿ ಜೀಕ್ಸನ್ ಸಿಂಗ್ ಪೆಟ್ಟು ನೀಡಿದರು. ಐದು ಪಂದ್ಯಗಳಲ್ಲಿ ಒಂದು ಡ್ರಾ ಮತ್ತು ನಾಲ್ಕು ಸೋಲಿನೊಂದಿಗೆ ನಿರಾಸೆಗೆ ಒಳಗಾಗಿದ್ದ ಬೆಂಗಾಲ್ ತಂಡ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ನಿಗದಿತ ಅವಧಿಯ ಮುಕ್ತಾಯದ ವರೆಗೂ ಮುನ್ನಡೆ ಸಾಧಿಸಿತ್ತು. ಆದರೆ ಇಂಜುರಿ ಅವಧಿಯಲ್ಲಿ ಸಹಾಲ್ ಅಬ್ದುಲ್ ಸಮದ್ ನೀಡಿದ ಕ್ರಾಸ್‌ನಲ್ಲಿ ಗೋಲು ಗಳಿಸಿದ ಜೀಕ್ಸನ್ ಸಿಂಗ್ ಕೇರಳಕ್ಕೆ ಸಮಬಲದ ಸಮಾಧಾನ ಗಳಿಸಿಕೊಟ್ಟರು. 13ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್‌ನ ಬಕಾರಿ ಕೋನೆ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಒದ್ದು ಎದುರಾಳಿಗಳಿಗೆ ‘ಉಡುಗೊರೆ’ ನೀಡಿದ್ದರು. ಮುಂಬೈ ಸಿಟಿಗೆ ಗೆಲುವು ವಿಘ್ನೇಶ್ ದಕ್ಷಿಣಾಮೂರ್ತಿ ಹಾಗೂ ಆಡಂ ಲೀ ಫಾಂಡ್ರೆ ಗಳಿಸಿದ ಗೋಲುಗಳ ನೆರವಿನಿಂದ ಹೈದರಾಬಾದ್ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಮುಂಬೈ ಸಿಟಿ ಎಫ್‌ಸಿ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಆರಂಭದಿಂದಲೇ ಎರಡೂ ತಂಡಗಳು ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸಿದ ಕಾರಣ ಪಂದ್ಯ ರೋಚಕವಾಗಿತ್ತು. 38ನೇ ನಿಮಿಷದಲ್ಲಿ ವಿಘ್ನೇಶ್‌ ಗೋಲು ಗಳಿಸಿ ಮುಂಬೈ ಸಿಟಿ ಎಫ್‌ಸಿಗೆ ಮುನ್ನಡೆ ತಂದುಕೊಟ್ಟರು. 59ನೇ ನಿಮಿಷದಲ್ಲಿ ಎಡಭಾಗದಿಂದ ರಾವ್ಲಿನ್ ಬೋರ್ಜೆಸ್‌ ನೀಡಿದ ಕ್ರಾಸ್‌ಗೆ ಕಾಲೊಡ್ಡಿದ ಫಾಂಡ್ರೆ ಮೋಹಕವಾಗಿ ಚೆಂಡನ್ನು ಗುರಿಮುಟ್ಟಿಸಿದರು. ಗೋಲ್‌ಕೀಪರ್‌ ಸುಬ್ರತೊ ಪಾಲ್ ಚೆಂಡನ್ನು ತಡೆಯಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಇದು ಲೀಗ್‌ನಲ್ಲಿ ಫಾಂಡ್ರೆ ಗಳಿಸಿದ ಐದನೇ ಗೋಲು. ಸಮಬಲ ಸಾಧಿಸಲು ಹೈದರಾಬಾದ್ ಎಫ್‌ಸಿ ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಹೀಗಾಗಿ ಹೈದರಾಬಾದ್ ಎಫ್‌ಸಿ ಏಳನೇ ಆವೃತ್ತಿಯಲ್ಲಿ ಮೊದಲ ಸೋಲು ಕಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.