ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಒಲಿಯುವುದೇ ಒಡಿಶಾಗೆ ಮೊದಲ ಜಯ? ಫತೋರ್ಡ: ಆರು ಪಂದ್ಯಗಳಲ್ಲಿ ಕೇವಲ ಒಂದು ಪಾಯಿಂಟ್ ಗಳಿಸಿ ಪಾಯಿಂಟ್ ಪಟ್ಟಿಯ ಕೊನೆಯಲ್ಲಿರುವ ಒಡಿಶಾ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಜಯದ ಕನಸು ಹೊತ್ತುಕೊಂಡು ಮಂಗಳವಾರ ಕಣಕ್ಕೆ ಇಳಿಯಲಿದೆ. ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಈ ತಂಡಕ್ಕೆ ನಾರ್ತ್ ಈಸ್ಟ್ ಯುನೈಟೆಡ್ ಎದುರಾಳಿ. ಒಡಿಶಾ ಎಫ್‌ಸಿ ಈ ವರೆಗೆ ಕಳಪೆ ಪ್ರದರ್ಶನ ನೀಡಿದ್ದು ಐದು ಪಂದ್ಯಗಳಲ್ಲಿ ಸೋತಿದೆ. ಆದರೆ ನಾರ್ತ್ ಈಸ್ಟ್ ತಂಡ ಅಮೋಘ ಸಾಮರ್ಥ್ಯ ತೋರಿ ಪಾಯಿಂಟ್ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಆರು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ನಾರ್ತ್ ಈಸ್ಟ್ ಕಳೆದ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ವಿರುದ್ಧ ಏಕೈಕ ಗೋಲಿಗೆ ಶರಣಾಗಿತ್ತು. ಹೀಗಾಗಿ ಗೆಲುವಿನ ಲಯಕ್ಕೆ ಮರಳಲು ಈ ತಂಡ ಮಂಗಳವಾರ ಪ್ರಯತ್ನಿಸಲಿದೆ. ಆಕ್ರಮಣ ಮತ್ತು ರಕ್ಷಣಾ ವಿಭಾಗಗಳೆರಡರಲ್ಲೂ ಒಡಿಶಾ ಎಫ್‌ಸಿ ಈ ವರೆಗೆ ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. ಈ ವರೆಗೆ ಒಂಬತ್ತು ಗೋಲುಗಳನ್ನು ಬಿಟ್ಟುಕೊಟ್ಟಿದ್ದು ಈ ಪೈಕಿ ಏಳು ಗೋಲುಗಳು ಮೊದಲಾರ್ಧದಲ್ಲೇ ದಾಖಲಾಗಿವೆ. ಈ ಬಾರಿ ಅತಿ ಕಡಿಮೆ ಗೋಲು ಗಳಿಸಿದ ತಂಡಗಳ ಪಟ್ಟಿಯ ಕೊನೆಯಲ್ಲಿರುವ ಒಡಿಶಾ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲೂ ವೈಫಲ್ಯ ಕಂಡಿದೆ. ಕನಿಷ್ಠ, 42 ಅವಕಾಶಗಳನ್ನು ಮಾತ್ರ ಈ ತಂಡ ಇಲ್ಲಿಯ ವರೆಗೆ ಸೃಷ್ಟಿಸಿದೆ. ನಾರ್ತ್ ಈಸ್ಟ್ ತಂಡದ ಪರ ಹೆಚ್ಚು ಗೋಲು ಗಳಿಸಿರುವ ಇದ್ರಿಸಾ ಸಿಲಾ ಮತ್ತು ಕ್ವೇಸಿ ಅಪ್ಪಯ್ಯ ಅವರು ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರನ್ನು ಕಟ್ಟಿಹಾಕುವ ಜವಾಬ್ದಾರಿಯನ್ನು ಒಡಿಶಾ ತಂಡದ ರಕ್ಷಣಾ ವಿಭಾಗದವರ ಮೇಲೆ ಇದೆ. ‘ನಾರ್ತ್ ಈಸ್ಟ್ ತಂಡ ಈ ಬಾರಿ ಅತ್ಯುತ್ತಮವಾಗಿ ಆಡುತ್ತಿದೆ. ಎಲ್ಲ ವಿಭಾಗದವರೂ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಆಧಿಪತ್ಯ ಸ್ಥಾಪಿಸುವ ಮಿಡ್‌ಫೀಲ್ಡರ್‌ಗಳು ಮತ್ತು ಆಕ್ರಮಣ ವಿಭಾಗದ ಆಟಗಾರರು ಸ್ಟ್ರೈಕರ್‌ಗಳಿಗೆ ಚೆಂಡು ಸುಲಭವಾಗಿ ಸಿಗುವಂತೆ ಮಾಡುತ್ತಾರೆ. ಕೆಲವರು ಚುರುಕಿನ ಆಟ ಪ್ರದರ್ಶಿಸುತ್ತಿದ್ದಾರೆ. ಇದೆಲ್ಲವೂ ನಮ್ಮ ಗಮನದಲ್ಲಿದ್ದು ಪ್ರತಿತಂತ್ರ ಹೂಡಲು ಸಜ್ಜಾಗಿದ್ದೇವೆ’ ಎಂದು ಒಡಿಶಾ ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಹೇಳಿದರು. ನಾರ್ತ್ ಈಸ್ಟ್ ಯುನೈಟೆಡ್ ಕೂಡ ಮೊದಲಾರ್ಧದಲ್ಲಿ ಗೋಲು ಬಿಟ್ಟುಕೊಡುತ್ತಿದೆ. ಒಟ್ಟು ಆರು ಗೋಲುಗಳ ಪೈಕಿ ನಾಲ್ಕನ್ನು ಈ ರೀತಿ ನೀಡಿದೆ. ಕಳೆದ ಎರಡು ಪಂದ್ಯಗಳಲ್ಲಿ ಸಾಕಷ್ಟು ಅವಕಾಶ ಸೃಷ್ಟಿಸಲು ಸಾಧ್ಯವಾಗಿದ್ದರೂ ಚೆಂಡನ್ನು ಗುರಿಮುಟ್ಟಿಸುವಲ್ಲಿ ವಿಫಲವಾಗಿರುವುದು ತಂಡದಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಹಿಂದಿನ ಫಲಿತಾಂಶಗಳನ್ನು ಮರೆತು ಹೊಸ ಹುರುಪಿನೊಂದಿಗೆ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಿರುವ ಕೋಚ್ ಜೆರಾಲ್ಡ್ ನೂಸ್ ‘ಕಳೆದ ಪಂದ್ಯದಲ್ಲಿ ಸೋತಿರುವುದರಿಂದ ಈಗ ಜಯದ ಹಸಿವು ಹೆಚ್ಚಾಗಿದೆ. ಒಗ್ಗಟ್ಟಿನ ಆಟ ಪ್ರದರ್ಶಿಸಿ ಮತ್ತೆ ಗೆಲುವಿನ ಲಯಕ್ಕೆ ಮರಳಲು ಆಟಗಾರರು ಸಜ್ಜಾಗಿದ್ದಾರೆ. ಆಕ್ರಮಣಕಾರಿ ಆಟವಾಡುವುದು ಮಂಗಳವಾರದ ಪಂದ್ಯದ ಪ್ರಮುಖ ಗುರಿಯಾಗಿದ್ದು ಮೂರು ಪಾಯಿಂಟ್‌ಗಳನ್ನು ಕಲೆ ಹಾಕಲು ಶತಾಯಗತಾಯ ಪ್ರಯತ್ನ ನಡೆಯಲಿದೆ’ ಎಂದರು. ಮುಖಾಮುಖಿ:ಪಂದ್ಯ 12 ನಾರ್ತ್ ಈಸ್ಟ್ಯುನೈಟೆಡ್‌ ಜಯ 4 ಒಡಿಶಾ ಎಫ್‌ಸಿ ಗೆಲುವು 4 ಡ್ರಾ 4 ಮುಖಾಮುಖಿಯಲ್ಲಿ ಗೋಲು ನಾರ್ತ್ ಈಸ್ಟ್ ಯುನೈಟೆಡ್‌ 14 ಒಡಿಶಾ ಎಫ್‌ಸಿ 12 ಏಳನೇ ಆವೃತ್ತಿಯಲ್ಲಿ ಉಭಯ ತಂಡಗಳ ಸಾಧನೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.