ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಎಟಿಕೆಎಂಬಿಗೆ ಜಯದ ವಿಶ್ವಾಸ ಬ್ಯಾಂಬೊಲಿಮ್‌: ಕಳೆದ ಪಂದ್ಯಗಳಲ್ಲಿ ಎಫ್‌ಸಿ ಗೋವಾ ಹಾಗೂ ಬೆಂಗಳೂರು ಎಫ್‌ಸಿ ಎದುರು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಎಟಿಕೆ ಮೋಹನ್‌ ಬಾಗನ್ ತಂಡವು, ಇಂಡಿಯನ್ ಸೂಪರ್ ಲೀಗ್ ‌(ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ಚೆನ್ನೈಯಿನ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಟಿಕೆ ತಂಡವು 2019ರ ಐಎಸ್‌ಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈಯಿನ್ ತಂಡವನ್ನೇ ಮಣಿಸಿ ದಾಖಲೆಯ ಮೂರನೇ ಬಾರಿ ಪ್ರಶಸ್ತಿ ಗೆದ್ದಿತ್ತು. ಬಳಿಕ ಮೋಹನ್ ಬಾಗನ್ ತಂಡದೊಂದಿಗೆ ವಿಲೀನಗೊಂಡಿತ್ತು. ಆ್ಯಂಟೊನಿಯೊ ಲೋಪೆಜ್ ಹಬಾಸ್‌ ತರಬೇತಿಯಲ್ಲಿ ಪಳಗಿರುವ ಎಟಿಕೆ ಮೋಹನ್‌ ಬಾಗನ್‌ (ಎಟಿಕೆಎಂಬಿ) 10 ದಿನಗಳ ವಿರಾಮದ ಬಳಿಕ ಕಣಕ್ಕಿಳಿಯುತ್ತಿದೆ. ಕಳೆದ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಎದುರು 2–2ರ ಡ್ರಾ ಸಾಧಿಸಿರುವ ಚೆನ್ನೈಯಿನ್ ಕೂಡ ಜಯದ ತವಕದಲ್ಲಿದೆ. ಈ ಹಣಾಹಣಿಯಲ್ಲಿ ಗೆದ್ದರೆ ಎಟಿಕೆಎಂಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಡೇವಿಡ್ ವಿಲಿಯಮ್ಸ್ ಹಾಗೂ ಫಿಜಿ ದೇಶದ ಪ್ರತಿಭೆ ರಾಯ್ ಕೃಷ್ಣ ಆ ತಂಡದ ಶಕ್ತಿಯಾಗಿದ್ದಾರೆ. ಚೆನ್ನೈ ಎಫ್‌ಸಿ ತಂಡ ಕೂಡ ಸಾಬಾ ಲಾಜಲೊ ತರಬೇತಿಯಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದೆ. ಆಕ್ರಮಣ ವಿಭಾಗದಲ್ಲಿ ಜಾಕಬ್ ಸಿಲ್ವೆಸ್ಟರ್‌ ಬಲ ಆ ತಂಡಕ್ಕಿದೆ. ಮಿಡ್‌ಫೀಲ್ಡ್‌ನಲ್ಲಿ ರಫೆಲ್‌ ಕ್ರಿವೆಲ್ಲಾರೊ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ಪಂದ್ಯ ಆರಂಭ: ಸಂಜೆ 7.30 ಸ್ಥಳ: ಜಿಎಂಸಿ ಕ್ರೀಡಾಂಗಣ, ಬ್ಯಾಂಬೊಲಿಮ್‌ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.