ಜೆಮ್ಶೆಡ್‌ಪುರ ಎಫ್‌ಸಿಗೆ ಪ್ಲೇ ಆಫ್ ಕನಸು ಮಡಗಾಂವ್: ಪ್ಲೇ ಆಫ್ ಪ್ರವೇಶದ ಹಂಬಲದಲ್ಲಿರುವ ಜೆಮ್ಶೆಡ್‌ಪುರ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ಎಸ್‌ಸಿ ಈಸ್ಟ್ ಬೆಂಗಾಲ್ ತಂಡಕ್ಕೆ ಮುಖಾಮುಖಿಯಾಗಲಿದೆ. ಟೂರ್ನಿಯಲ್ಲಿಜಮ್ಶೆಡ್‌ಪುರ ಎಫ್‌ಸಿ ಇನ್ನೂ ಐದು ಲೀಗ್ ಪಂದ್ಯಗಳನ್ನು ಆಡಬೇಕಿದೆ. ಕೊನೆಯ ಎರಡು ಪ್ಲೇ ಆಫ್ ಸ್ಥಾನಗಳಲ್ಲಿ ಒಂದನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಉಳಿದಿರುವ ಪಂದ್ಯಗಳಲ್ಲಿ ಹೆಚ್ಚು ಪಾಯಿಂಟ್ಸ್ ಕಲೆಹಾಕುವ ಛಲದಲ್ಲಿದೆ. ಫತೋರ್ಡ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹಣಾಹಣಿಯಲ್ಲಿ ಬೆಂಗಾಲ್ ತಂಡವನ್ನು ಮಣಿಸುವ ವಿಶ್ವಾಸವನ್ನು ಓವೆನ್‌ ಕೊಯ್ಲೆ ತರಬೇತಿಯಲ್ಲಿರುವ ಜೆಮ್ಶಡ್‌ಪುರ ಹೊಂದಿದೆ. ಸತತ ಐದು ಪಂದ್ಯಗಳಲ್ಲಿ ಜಯ ಸಾಧಿಸದಿದ್ದಾಗ ಪ್ಲೇ ಆಫ್‌ ಪ್ರವೇಶದ ಕನಸು ಕೈಬಿಟ್ಟಿದ್ದ ಜೆಮ್ಶೆಡ್‌ಪುರ, ಕಳೆದ ಪಂದ್ಯದಲ್ಲಿ ಒಡಿಶಾ ಎದುರು ಗೆಲ್ಲುವ ಮೂಲಕ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಒಂದಾಗಲು ತಮ್ಮ ತಂಡವು, ಉತ್ತಮ ಲಯವನ್ನು ಮುಂದುವರಿಸಬೇಕಿದೆ ಎಂಬುದು ಕೊಯ್ಲೆ ಅಂಬೋಣ. ಈಸ್ಟ್‌ ಬೆಂಗಾಲ್ ತಂಡಕ್ಕೆ ಪ್ಲೇ ಆಫ್ ಪ್ರವೇಶದ ಅವಕಾಶ ಹೆಚ್ಚು ಇಲ್ಲ. ಭಾನುವಾರದ ಪಂದ್ಯದಲ್ಲಿ ಆ ತಂಡವು ಸೋತರೆ ಅದರ ಕನಸು ಮತ್ತಷ್ಟು ಕ್ಷೀಣಿಸಲಿದೆ. ಕಳೆದ ಐದು ಪಂದ್ಯಗಳಲ್ಲಿ ಆ ತಂಡವು ಗೆಲುವು ಸಾಧಿಸಿಲ್ಲ. ಇವುಗಳ ಪೈಕಿ ನಾಲ್ಕರಲ್ಲಿ ಒಂದು ಗೋಲೂ ಗಳಿಸಿಲ್ಲ. ಮತ್ತೊಂದು ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ತಂಡವು ಹೈದರಾಬಾದ್ ಎಫ್‌ಸಿಯನ್ನು ಎದುರಿಸಲಿದೆ. ವಾಸ್ಕೋದ ತಿಲಕ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯ ಆರಂಭ: ಸಂಜೆ 5 ಗಂಟೆ ಸ್ಥಳ: ಫತೋರ್ಡ ಕ್ರೀಡಾಂಗಣ, ಮಡಗಾಂವ್‌ ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.