ರೊನಾಲ್ಡೊ ಮೋಡಿ: ಯುವೆಂಟಸ್‌ ಜಯಭೇರಿ ಮಿಲಾನ್‌, ಇಟಲಿ: ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಸೊಗಸಾದ ಗೋಲುಗಳು ಯುವೆಂಟಸ್ ತಂಡದ ಜಯಕ್ಕೆ ಕಾರಣವಾದವು. ಇಟಾಲಿಯನ್ ಕಪ್ ಮೊದಲ ಲೆಗ್‌ನಲ್ಲಿ ಸೆಮಿಫೈನಲ್‌ನಲ್ಲಿ ಯುವೆಂಟಸ್‌ 2–1ರಿಂದ ಇಂಟರ್‌ ಮಿಲಾನ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತು. ಪಂದ್ಯದ 9ನೇ ನಿಮಿಷದಲ್ಲೇ ಲೌಟಾರೊ ಮಾರ್ಟಿನೆಜ್‌ ಕಾಲ್ಚಳಕ ತೋರುವ ಮೂಲಕ ಇಂಟರ್ ಮಿಲಾನ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 26ನೇ ನಿಮಿಷದಲ್ಲಿ ಯುವೆಂಟಸ್ ತಿರುಗೇಟು ನೀಡಿತು. ಪೆನಾಲ್ಟಿ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ರೊನಾಲ್ಡೊ ಸ್ಪಾಟ್‌ ಕಿಕ್‌ ಮೂಲಕ ಮೊದಲ ಗೋಲು ಹೊಡೆದರು. ಅದೇ ಲಯದೊಂದಿಗೆ ಮುನ್ನುಗ್ಗಿದ ಪೋರ್ಚುಗಲ್ ರಾಷ್ಟ್ರೀಯ ತಂಡದ ತಾರೆ 35ನೇ ನಿಮಿಷದಲ್ಲಿ ಸೊಗಸಾದ ಫೀಲ್ಡ್ ಗೋಲು ದಾಖಲಿಸಿ ತಂಡದಲ್ಲಿ ಸಂಭ್ರಮ ಅಲೆ ಏಳುವಂತೆ ಮಾಡಿದರು. ಎರಡು ವಾರಗಳ ಹಿಂದೆ ಸೀರಿ ಎ ಟೂರ್ನಿಯಲ್ಲಿ ಇಂಟರ್ ಮಿಲಾನ್‌ 2–0ಯಿಂದ ಯುವೆಂಟಸ್‌ ತಂಡವನ್ನು ಪರಾಭವಗೊಳಿಸಿತ್ತು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ನಪೋಲಿ ತಂಡವು ಅಟ್ಲಾಂಟ ಎದುರು ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.