ಯಂಗ್ ಚಾಲೆಂಜರ್ಸ್‌ಗೆ ಭರ್ಜರಿ ಜಯ ಬೆಂಗಳೂರು: ಉತ್ತಮ ಆಟವಾಡಿದ ಯಂಗ್ ಚಾಲೆಂಜರ್ಸ್‌ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬುಧವಾರ 5–1ರಿಂದ ಬೆಂಗಳೂರು ಇನ್‌ಕಮ್‌ ಟ್ಯಾಕ್ಸ್ ಎಫ್‌ಸಿ ತಂಡವನ್ನು ಮಣಿಸಿತು. ಚಾಲೆಂಜರ್ಸ್‌ ತಂಡದ ನಿಹಾಲ್ ಕೊಲ್ಯಾಸೊ (24 ಹಾಗೂ 71ನೇ ನಿಮಿಷ) ಮತ್ತು ಮುರಳಿ ಜೋಸೆಫ್‌ (60, 76ನೇ ನಿಮಿಷ) ತಲಾ ಎರಡು ಗೋಲು ದಾಖಲಿಸಿದರು. 63ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಅಭಿಷೇಕ್ ಪಂಚಮಿಯಾ ಕಾಲ್ಚಳಕ ತೋರಿದರು. ಇನ್‌ಕಮ್ ಟ್ಯಾಕ್ಸ್ ತಂಡದ ಪರ ಅಸ್ಟಿನ್‌ (87ನೇ ನಿಮಿಷ, ಪೆನಾಲ್ಟಿ) ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಎಂಇಜಿ ಆ್ಯಂಡ್‌ ಸೆಂಟರ್‌ ಎಫ್‌ಸಿ 2–1ರಿಂದ ಬೆಂಗಳೂರು ಇಂಡಿಪೆಂಡೆಂಟ್ಸ್ ಎದುರು ಗೆದ್ದಿತು. ಎಂಇಜಿ ತಂಡದ ಅಜಯ್‌ ಅಲೆಕ್ಸ್ ಅಂಥೋನಿ 65ನೇ ನಿಮಿಷದಲ್ಲಿ ಹಾಗೂ ಲೆಥೊಲೆನ್‌ 82ನೇ ನಿಮಿಷಗಳಲ್ಲಿ ಗೋಲು ಹೊಡೆದು ಗೆಲುವಿನ ರೂವಾರಿಯಾದರು. ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡದ ಏಕೈಕ ಗೋಲು ಸತೀಶ್ ಕುಮಾರ್‌ (83ನೇ ನಿಮಿಷ) ಅವರ ಮೂಲಕ ಬಂತು. ಗುರುವಾರ ನಡೆಯುವ ಪಂದ್ಯಗಳಲ್ಲಿ ಎಡಿಇ ಎಫ್‌ಸಿ–ಬಿಎಫ್‌ಸಿ, ಬೆಂಗಳೂರು ಡ್ರೀಮ್ ಯುನೈಟೆಡ್‌ ಎಫ್‌ಸಿ–ಕಿಕ್‌ಸ್ಟಾರ್ಟ್‌ ಎಫ್‌ಸಿ ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.