ಕೆಎಸ್‌ಎಫ್‌ಎ ಮಹಿಳಾ ಫುಟ್‌ಬಾಲ್ ಲೀಗ್‌: ಮಿಸಾಕಾ ಯುನೈಟೆಡ್‌ಗೆ ಭರ್ಜರಿ ಜಯ ಬೆಂಗಳೂರು: ಲಾಲ್‌ರಿನ್‌ಮುವಾನಿ ಹಾಗೂ ಲಾಲ್‌ರಿನ್‌ವಾನಿ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಮಿಸಾಕಾ ಯುನೈಟೆಡ್ ಎಫ್‌ಸಿ ತಂಡವು 10–1 ಗೋಲುಗಳಿಂದ ಬೆಂಗಳೂರು ಸಾಕರ್‌ ಗೆಲಾಕ್ಸಿ ತಂಡವನ್ನು ಮಣಿಸಿತು. ರಾಜ್ಯ ಫುಟ್‌ಬಾಲ್ ಸಂಸ್ಥೆಯ (ಕೆಎಸ್‌ಎಫ್‌ಎ) ಕರ್ನಾಟಕ ಮಹಿಳಾ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಮಿಸಾಕಾ ತಂಡಕ್ಕೆ ಭರ್ಜರಿ ಜಯ ಒಲಿಯಿತು. ವಿಜೇತ ತಂಡದ ಲಾಲ್‌ರಿನ್‌ಮುವಾನಿ 8, 23 ಹಾಗೂ 74ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರೆ, ಲಾಲ್‌ರಿನ್‌ವಾನಿ 25, 27 ಹಾಗೂ 33ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಮಾಲಾ (11ನೇ ನಿ.), ಅಂಜಲಿ (39ನೇ ನಿ.), ಋತಿ ಲಾಲ್‌ರಿನ್‌ಮಾವಿ (56ನೇ ನಿ.) ಹಾಗೂ ಲಾಲ್‌ತನ್‌ಸಾಂಗಿ (90) ತಲಾ ಒಂದು ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಸುಶ್ಮಿತಾ ಜಾಧವ್‌ (19 ಹಾಗೂ 44ನೇ ನಿಮಿಷ) ಗಳಿಸಿದ ಗೋಲುಗಳ ಬಲದಿಂದ ಬೆಂಗಳೂರು ಬ್ರೇವ್ಸ್ ಎಫ್‌ಸಿ 3–1ರಿಂದ ಪರಿಕ್ರಮ ಎಫ್‌ಸಿ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ವೆಲಾನಿ ಫರ್ನಾಂಡೀಸ್ (53ನೇ ನಿಮಿಷ) ಒಂದು ಗೋಲು ಹೊಡೆದರು. ಪರಿಕ್ರಮ ತಂಡದ ಕಾಜೋಲ್ ದೇವಗನ್‌ (11ನೇ ನಿಮಿಷ) ಯಶಸ್ಸು ಸಾಧಿಸಿದರು. ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ–ಬಿಯುಎಫ್‌ಸಿ ಹಾಗೂ ರೆಬೆಲ್ಸ್ ವಿಮೆನ್ಸ್ ಎಫ್‌ಸಿ– ಕಿಕ್‌ಸ್ಟಾರ್ಟ್‌ ಎಫ್‌ಸಿ ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.