ಐಎಸ್‌ಎಲ್‌: ಕೇರಳ–ಒಡಿಶಾಗೆ ಗೆಲುವಿನ ಹಂಬಲ ಫತೋರ್ಡ, ಗೋವಾ: ಒಡಿಶಾ ಎಫ್‌ಸಿ ತಂಡ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನು ಆಡಿದ್ದು ಕೇವಲ ಒಂದರಲ್ಲಿ ಜಯ ಗಳಿಸಿದೆ. ಐದರಲ್ಲಿ ಡ್ರಾ ಸಾಧಿಸಿರುವ ತಂಡ ಒಂಬತ್ತರಲ್ಲಿ ಸೋತಿದೆ. ತಂಡ ಗೆಲುವು ಸಾಧಿಸಿರುವ ಏಕೈಕ ಎದುರಾಳಿ ಕೇರಳ ಬ್ಲಾಸ್ಟರ್ಸ್‌. ಜನವರಿ ಏಳರಂದು ನಡೆದಿದ್ದ ಆ ಪಂದ್ಯದಲ್ಲಿ ಕೇರಳ 2–4ರಲ್ಲಿ ಸೋತಿತ್ತು. ಆ ತಂಡದ ವಿರುದ್ಧ ಎರಡನೇ ಲೆಗ್‌ನ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಗುರುವಾರ ಸೆಣಸಲಿದೆ. ಮೊದಲ ಎಂಟು ಪಂದ್ಯಗಳಲ್ಲಿ ಜಯ ಕಾಣದಿದ್ದ ಒಡಿಶಾ ಎಫ್‌ಸಿ ಒಂದು ಗೆಲುವಿನ ನಂತರ ಹಿಂದಿನ ಆರು ಪಂದ್ಯಗಳಲ್ಲಿ ಮತ್ತೆ ನಿರಾಸೆ ಕಂಡಿದೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ತಂಡದ ಪ್ಲೇ ಆಫ್ ಕನಸು ಈಗಾಗಲೇ ಕಮರಿದೆ. ಆದ್ದರಿಂದ ಮುಂದಿನ ಪಂದ್ಯಗಳಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. 11 ತಂಡಗಳ ಲೀಗ್‌ನಲ್ಲಿ ಪಾಯಿಂಟ್ ಪಟ್ಟಿಯ 10ನೇ ಸ್ಥಾನದಲ್ಲಿರುವ ಕೇರಳ ತಂಡ ಒತ್ತಡದಲ್ಲಿದೆ. ಮೊದಲ ಲೆಗ್‌ನಲ್ಲಿ ಒಡಿಶಾ ಎದುರು ಅನುಭವಿಸಿದ ಸೋಲಿಗೆ ತಿರುಗೇಟು ನೀಡಲು ಶ್ರಮಿಸುವುದರೊಂದಿಗೆ ಪ್ಲೇ ಆಫ್ ಹಂತದ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯೂ ಆ ತಂಡಕ್ಕೆ ಇದೆ. ಕೇರಳ ಬಲಿಷ್ಠ ತಂಡವಾಗಿದ್ದು ಗೆಲುವಿಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಿದೆ ಎಂಬುದು ಒಡಿಶಾ ಕೋಚ್ ಜೆರಾಲ್ಡ್ ಪೈಟನ್ ತಿಳಿದಿದೆ. ಆದರೆ ಮೊದಲ ಲೆಗ್‌ನಲ್ಲಿ ಆ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರಿಂದ ಈ ಪಂದ್ಯದಲ್ಲಿ ಆಟಗಾರರು ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದ್ದಾರೆ ಎಂಬುದು ಅವರ ಅನಿಸಿಕೆ. ‘ಕೇರಳ ಬ್ಲಾಸ್ಟರ್ಸ್‌ನಲ್ಲಿ ಉತ್ತಮ ಆಟಗಾರರು ಇದ್ದಾರೆ. ಆದರೆ ಅವರು ಯಾವ ತಂತ್ರ ಅನುಸರಿಸುತ್ತಾರೆ ಎಂಬುದರ ಅರಿವು ನಮಗಿದೆ. ತಲಾ ನಾಲ್ವರು ಡಿಫೆಂಡರ್‌ಗಳು ಮತ್ತು ಮಿಡ್‌ಫೀಲ್ಡರ್‌ಗಳು, ಇಬ್ಬರು ಫಾರ್ವರ್ಡರ್‌ಗಳೊಂದಿಗೆ ಆ ತಂಡ ಕಣಕ್ಕೆ ಇಳಿಯಲಿದೆ. ನಾವು ಕೂಡ ಇದೇ ಮಾದರಿಯಲ್ಲಿ ಆಡಲಿದ್ದೇವೆ. ಈ ಮೂಲಕ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಲಿದ್ದೇವೆ. ಇದರಲ್ಲಿ ಯಶಸ್ಸು ಸಿಗಲಿದೆ ಎಂಬ ಭರವಸೆ ಇದೆ’ ಎಂದು ಜೆರಾಲ್ಡ್‌ ಅಭಿಪ್ರಾಯಪಟ್ಟರು. ಕೇರಳ ಬ್ಲಾಸ್ಟರ್ಸ್‌ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಜಯ ಕಂಡಿಲ್ಲ. ತಂಡ ಈ ವರೆಗೆ ಒಟ್ಟು 27 ಗೋಲುಗಳನ್ನು ಬಿಟ್ಟುಕೊಟ್ಟಿದ್ದುಲೀಗ್‌ನಲ್ಲಿ ಈ ವರೆಗೆ ಅತಿ ಹೆಚ್ಚು ಗೋಲು ಕೊಟ್ಟ ತಂಡವಾಗಿದೆ. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಒಡಿಶಾ ಇದ್ದು 27 ಗೋಲು ಬಿಟ್ಟುಕೊಟ್ಟಿದೆ. ಎರಡೂ ತಂಡಗಳ ರಕ್ಷಣಾ ವಿಭಾಗದ ವೈಫಲ್ಯಈ ವರೆಗಿನ ಪಂದ್ಯಗಳಲ್ಲಿ ಎದ್ದುಕಂಡಿದೆ. ಗುರುವಾರ ಈ ಸಮಸ್ಯೆಯನ್ನು ಮೆಟ್ಟಿನಿಂತು ಯಾವ ತಂಡ ಜಯ ಗಳಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.