ಐಎಸ್‌ಎಲ್‌: ಜೆಮ್ಶೆಡ್‌ಪುರಕ್ಕೆ ಜಯದ ‘ಉಡುಗೊರೆ’ ಬ್ಯಾಂಬೊಲಿಮ್‌: ಪಂದ್ಯದ ಕೊನೆಯ ನಿಮಿಷದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ನೀಡಿದ ‘ಉಡುಗೊರೆ ಗೋಲು‘ ಜೆಮ್ಶೆಡ್‌ಪುರ ತಂಡದ ಜಯಕ್ಕೆ ಕಾರಣವಾಯಿತು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಜೆಮ್ಶೆಡ್‌ಪುರ ಎಫ್‌ಸಿ ತಂಡವು 1–0ಯಿಂದ ಚೆನ್ನೈಯಿನ್ ಎಫ್‌ಸಿಗೆ ಸೋಲುಣಿಸಿತು. ಪಂದ್ಯದ ನಾಲ್ಕನೇ ನಿಮಿಷದಲ್ಲಿ ಚೆನ್ನೈಯಿನ್ ತಂಡದ ಅವಕಾಶವೊಂದನ್ನು ಎದುರಾಳಿ ಗೋಲ್‌ಕೀಪರ್‌ ಟಿ.ಪಿ.ರೆಹನೇಶ್ ವಿಫಲಗೊಳಿಸಿದರು. ಬಳಿಕ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರೂ ಮೊದಲಾರ್ಧದಲ್ಲಿ ಯಶಸ್ಸು ಸಿಗಲಿಲ್ಲ. ಆ ಬಳಿಕವೂ ಇದೇ ಸ್ಥಿತಿ ಮುಂದುವರಿಯಿತು. 90ನೇ ನಿಮಿಷದಲ್ಲಿ ಈನೆಸ್‌ ಸಿಪೊವಿಚ್‌ ತಮ್ಮ ತಂಡ ಚೆನ್ನೈ ಎಫ್‌ಸಿಗೆ ಖಳನಾಯಕನಾದರು. ಚೆಂಡು ಹಿಡಿತಕ್ಕೆ ಪಡೆದಿದ್ದ ಜೆಮ್ಶೆಡ್‌ಪುರ ಎಫ್‌ಸಿಯ ಡೇವಿಡ್‌ ಗ್ರ್ಯಾಂಡೆ ಅವರು ಗೋಲು ಪೋಸ್ಟ್‌ನತ್ತ ಧಾವಿಸಿದರು. ಎದುರಾಳಿ ಗೋಲ್‌ಕೀಪರ್‌ನನ್ನು ಪರೀಕ್ಷಿಸಲು ಗೋಲು ಪೋಸ್ಟ್‌ನಿಂದ ಚೆಂಡನ್ನು ಸ್ವಲ್ಪ ದೂರಕ್ಕೆ ಕೊಂಡೊಯ್ಯುವ ವೇಳೆ ಆಕಸ್ಮಿಕವಾಗಿ ಸಿಪೊವಿಚ್‌ ಕಾಲಿಗೆ ಸಿಕ್ಕಿದ ಚೆಂಡು ಗೋಲಿನ ಬಲೆಯೊಳಗೆ ಸೇರಿತು. ಜೆಮ್ಶೆಡ್‌ಪುರ ತಂಡದಲ್ಲಿ ಸಂತಸ ಉಕ್ಕಿತು. ಜೆಮ್ಶೆಡ್‌ಪುರ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಸದ್ಯ ಆರನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.