ಫುಟ್‌ಬಾಲ್: ಈಗಲ್ಸ್‌, ಎಫ್‌ಸಿ ಡೆಕ್ಕನ್‌ಗೆ ಜಯ ಬೆಂಗಳೂರು: ಕ್ಲೀಟಸ್ ಡೊಮಿನಿಕ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬೆಂಗಳೂರು ಈಗಲ್ಸ್ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಸೂಪರ್ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಭರ್ಜರಿ ಜಯ ಸಾಧಿಸಿತು. ಬೆಂಗಳೂರು ಫುಟ್‌ಬಾಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆದಾಯ ತೆರಿಗೆ ಎಫ್‌ಸಿಯನ್ನು ಈಗಲ್ಸ್‌ ಏಕಪಕ್ಷೀಯ ಐದು ಗೋಲುಗಳಿಂದ ಮಣಿಸಿತು. ಮೊಹಮ್ಮದ್ ರಿಯಾಜ್ 11ನೇ ನಿಮಿಷದಲ್ಲಿ ಗಳಿಸಿದ ಗೋಲಿನೊಂದಿಗೆ ತಂಡ ಮುನ್ನಡೆ ಸಾಧಿಸಿತು. 26, 57 ಮತ್ತು 69ನೇ ನಿಮಿಷಗಳಲ್ಲಿ ಕ್ಲೀಟಸ್ ಚೆಂಡನ್ನು ಗುರಿ ಸೇರಿಸಿದರು. 85ನೇ ನಿಮಿಷದಲ್ಲಿ ಸೀನು ಎಸ್‌ ಜಯದ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಎಫ್‌ಸಿ ಡೆಕ್ಕನ್ 2–1 ಗೋಲುಗಳಿಂದ ಬೆಂಗಳೂರು ಇಂಡಿಪೆಂಡೆನ್ಸ್‌ ಎಫ್‌ಸಿಯನ್ನು ಸೋಲಿಸಿತು. ಡೆಕ್ಕನ್ ಪರವಾಗಿ ಅರವಿಂದ ಕುಮಾರ್ (47ನೇ ನಿ) ಮತ್ತು ಸಜೀಶ್ (58ನೇ ನಿ), ಇಂಡಿಪೆಂಡೆನ್ಸ್‌ಗಾಗಿ ಹೇಮಂತ್ ಕುಮಾರ್ (25ನೇ ನಿ) ಗೋಲು ಗಳಿಸಿದರು. ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಮತ್ತು ಬೆಂಗಳೂರು ಇಂಡಿಪೆಂಡೆನ್ಸ್‌ ನಡುವೆ ಹಣಾಹಣಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.