ಬೆಂಗಳೂರು ಫುಟ್‌ಬಾಲ್‌ ಮೈದಾನದಲ್ಲಿ ‘ಕಾಳಗ’ ಬೆಂಗಳೂರು: ನಗರದ ಬೆಂಗಳೂರು ಫುಟ್‌ಬಾಲ್ ಮೈದಾನ ಸೋಮವಾರ ಮಧ್ಯಾಹ್ನ ಬೆಂಗಳೂರು ಎಫ್‌ಸಿ ಅಧಿಕಾರಿಗಳು ಮತ್ತು ರೆಫರಿಗಳ ನಡುವಿನ ಕಾಳಗಕ್ಕೆ ವೇದಿಕೆಯಾಯಿತು. ಕೆಲವು ಬಾಹ್ಯ ಶಕ್ತಿಗಳು ಕೂಡ ಗಲಾಟೆಯಲ್ಲಿ ಭಾಗಿಯಾದ ಕಾರಣ ರಾಜ್ಯ ಫುಟ್‌ಬಾಲ್ ಸಂಸ್ಥೆಯ (ಕೆಎಸ್‌ಎಫ್‌ಎ) ಹಾಗೂ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ (ಬಿಡಿಎಫ್ಎ) ಕಚೇರಿಯ ಕಿಟಕಿ ಗಾಜಿಗೂ ಕಲ್ಲುಗಳು ಬಿದ್ದವು. ಬಿಡಿಎಫ್‌ಎ ಆಯೋಜಿಸಿರುವ ಸೂಪರ್ ಡಿವಿಷನ್ ಲೀಗ್‌ನ ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಬೆಂಗಳೂರು ಎಫ್‌ಸಿಯನ್ನು 3–2ರಲ್ಲಿ ಮಣಿಸಿತ್ತು. ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಏಕಾಏಕಿ ಗಲಾಟೆ ಆರಂಭವಾಯಿತು. ಪಂದ್ಯದಲ್ಲಿ ಮೂರು ಪೆನಾಲ್ಟಿ ಕಿಕ್‌ಗಳನ್ನು ರೆಫರಿ ನಿರಾಕರಿಸಿದರು ಎಂದು ತಂಡದ ಅಧಿಕಾರಿಗಳು ಆರೋಪಿಸಿದ್ದರು. ಡಿಫೆಂಡರ್ ಹರಪ್ರೀತ್ ಸಿಂಗ್‌ಗೆ ರೆಡ್ ಕಾರ್ಡ್ ತೋರಿಸಿದ್ದು ಅವರನ್ನು ಮತ್ತಷ್ಟು ಕುಪಿತಗೊಳಿಸಿತ್ತು. ರೆಫರಿ ಜೊತೆ ವಾಗ್ವಾದ ನಡೆಸಿ ಅವಾಚ್ಯ ಪದಕಗಳಿಂದ ನಿಂದಿಸಿದ್ದಕ್ಕಾಗಿ ರೆಡ್ ಕಾರ್ಡ್ ತೋರಿಸಲಾಗಿತ್ತು ಎಂದು ಟೂರ್ನಿಯ ಅಧಿಕಾರಿಗಳು ತಿಳಿಸಿದರು. ಪಂದ್ಯದ ನಂತರ ಅಧಿಕಾರಿಗಳು ಮತ್ತು ತಂಡದ ಅಭಿಮಾನಿಗಳು ರೆಫರಿಯ ಕೋಣೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದು ಕಿಟಕಿಯ ಗಾಜಿಗೆ ಇಟ್ಟಿಗೆ ಎಸೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ‍ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಮನಗಂಡು ಪೊಲೀಸರನ್ನು ಕರೆಸಲಾಯಿತು. ರೆಫರಿಗಳನ್ನು ಭದ್ರತೆಯೊಂದಿಗೆ ಅವರ ಮನೆಗಳಿಗೆ ತಲುಪಿಸಲಾಯಿತು. ಘಟನೆಯ ಬಗ್ಗೆ ವರದಿ ನೀಡುವಂತೆ ರೆಫರಿಗೆ ಸೂಚಿಸಲಾಗಿದ್ದು ಅದರ ಆಧಾರದಲ್ಲಿ ಸಂಬಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಎಫ್‌ಎ ಮತ್ತು ಬಿಡಿಎಫ್‌ಎ ಅಧಿಕಾರಿಗಳು ತಿಳಿಸಿದ್ದಾರೆ. ಡ್ರೀಮ್‌, ಯುನೈಟೆಡ್‌ಗೆ ಗೆಲುವು: ಡ್ರೀಮ್ ಯುನೈಟೆಡ್‌ 2–1ರಿಂದ ಆದಾಯ ತೆರಿಗೆ ತಂಡವನ್ನು, ಎಫ್‌ಸಿ ಬೆಂಗಳೂರು ಯುನೈಟೆಡ್‌ 3–2ರಲ್ಲಿ ಬಿಎಫ್‌ಸಿಯನ್ನು ಮಣಿಸಿತು. ಡ್ರೀಮ್ ಯುನೈಟೆಡ್ ಪರ ದೊರ್ಜಿ (52ನೇ ನಿಮಿಷ, ಜೇಕಬ್ ಜಾನ್ 54ನೇ ನಿ) ಮತ್ತು ಆದಾಯ ತೆರಿಗೆ ಸಾಕರ್ ‍ಪರ ಅಮಲ್ (17ನೇ ನಿ, ಪೆನಾಲ್ಟಿ) ಗೋಲು ಗಳಿಸಿದರು. ಎಫ್‌ಸಿ ಬೆಂಗಳೂರಿಗಾಗಿ ಡ್ಯಾನಿಯಲ್ ಒಲಿವರ್ (17ನೇ ನಿ), ರಾಬರ್ಟ್‌ ಪ್ರೈಮಸ್‌ (75ನೇ ನಿ), ರೊನಾಲ್ಡೊ ಆಗಸ್ಟೊ (90+5ನೇ ನಿ) ಗೋಲು ಗಳಿಸಿದರೆ ಬಿಎಫ್‌ಸಿಗಾಗಿ ಶಿವಶಕ್ತಿ (58ನೇ ನಿ), ದಮೈಫಂಗ್‌ (90+3ನೇ ನಿ) ಚೆಂಡನ್ನು ಗುರಿ ಸೇರಿಸಿದರು. ಮಂಗಳವಾರ ಮಧ್ಯಾಹ್ನ 1.30ಕ್ಕೆ ಕಿಕ್‌ಸ್ಟಾರ್ಟ್‌ ಎಫ್‌ಸಿ ಮತ್ತು ಎಎಸ್‌ಸಿ–ಸೆಂಟರ್ ಎಫ್‌ಸಿ, 3.30ಕ್ಕೆ ಯಂಗ್ ಚಾಲೆಂಜರ್ಸ್‌ ಎಫ್‌ಸಿ ಮತ್ತು ಎಂಇಜಿ–ಸೆಂಟರ್ ಎಫ್‌ಸಿ ನಡುವೆ ಪಂದ್ಯಗಳು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.