ಫುಟ್‌ಬಾಲ್‌: ರೆಬೆಲ್ಸ್ ವಿಮೆನ್ಸ್‌ ತಂಡಕ್ಕೆ ರೋಚಕ ಗೆಲುವು ಬೆಂಗಳೂರು: ಪಂದ್ಯ ಮುಕ್ತಾಯದ ಹಂತದಲ್ಲಿದ್ದಾಗ ಅರ್ಚನಾ ಅನಿಲ್ ಗಳಿಸಿದ ಗೋಲಿನ ನೆರವಿನಿಂದ ರೆಬೆಲ್ಸ್ ವಿಮೆನ್ಸ್‌ ತಂಡ ರಾಜ್ಯ ಫುಟ್‌ಬಾಲ್ ಸಂಸ್ಥೆ ಸೂಪರ್ ಡಿವಿಷನ್ ತಂಡಗಳಿಗಾಗಿ ಆಯೋಜಿಸಿರುವ ಮಹಿಳಾ ಲೀಗ್‌ನಲ್ಲಿ ಗುರುವಾರ ಜಯಭೇರಿ ಮೊಳಗಿಸಿತು. ಬೆಂಗಳೂರು ಫುಟ್‌ಬಾಲ್ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ರೆಬೆಲ್ಸ್‌ 1–0 ಗೋಲಿನಿಂದ ಬೆಂಗಳೂರು ಬ್ರೇವ್ಸ್‌ ವಿರುದ್ಧ ಗೆಲುವು ದಾಖಲಿಸಿತು. ಡ್ರಾದತ್ತ ಸಾಗುತ್ತಿದ್ದ ಪಂದ್ಯದ 90+1ನೇ ನಿಮಿಷದಲ್ಲಿ ಅರ್ಚನಾ ಚೆಂಡನ್ನು ಗುರಿ ಮುಟ್ಟಿಸಿ ರೆಬೆಲ್ಸ್ ಬಳಗದಲ್ಲಿ ಸಂಭ್ರಮ ಮೂಡಿಸಿದರು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಾತೃ ಪ್ರತಿಷ್ಠಾನ ಮತ್ತು ಪರಿಕ್ರಮ ಎಫ್‌ಸಿ ತಂಡಗಳು ಸೆಣಸಲಿವೆ. ಎಫ್‌ಸಿ ಬೆಂಗಳೂರು, ಸ್ಟೂಡೆಂಟ್ಸ್ ಯೂನಿಯನ್‌ಗೆ ಜಯ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಸೂಪರ್ ಲೀಗ್ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ಮತ್ತು ಸ್ಟೂಡೆಂಟ್ಸ್‌ ಯೂನಿಯನ್ ಎಫ್‌ಸಿ ತಂಡಗಳು ಜಯ ಗಳಿಸಿದವು. ಎಫ್‌ಸಿ ಡೆಕ್ಕನ್ ಎದುರಿನ ಪಂದ್ಯದಲ್ಲಿ ರಾಬರ್ಟ್ ಜೂನಿಯರ್ ಪ್ರೈಮಸ್ ನಾಲ್ಕನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಎಫ್‌ಸಿ ಬೆಂಗಳೂರು 1–0ರಲ್ಲಿ ಜಯ ಗಳಿಸಿತು. ವಿಘ್ನೇಶ್ ಶ್ರೀನಿವಾಸ್ (4ನೇ ನಿಮಿಷ) ಮತ್ತು ಟೈಕಿ ಯೆಸ್ಡಿಡಾ (25ನೇ ನಿ) ಗಳಿಸಿದ ಗೋಲುಗಳ ನೆರವಿನಿಂದ ಸ್ಟೂಡೆಂಟ್ಸ್ ಯೂನಿಯನ್ 2–1ರಲ್ಲಿ ಬೆಂಗಳೂರು ಡ್ರೀಮ್ ಯುನೈಟೆಡ್‌ ಎಫ್‌ಸಿಯನ್ನು ಸೋಲಿಸಿತು. ಡ್ರೀಮ್ ಯುನೈಟೆಡ್‌ಗಾಗಿ ದೊರ್ಜಿ (29ನೇ ನಿ) ಗೋಲು ಗಳಿಸಿದರು. ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕಿಕ್‌ಸ್ಟಾರ್ಟ್‌ ಎಫ್‌ಸಿ ಮತ್ತು ಎಎಸ್‌ಸಿ–ಸೆಂಟರ್ ಎಫ್‌ಸಿ ತಂಡಗಳು ಸೆಣಸಲಿದ್ದು 3.30ಕ್ಕೆ ಯಂಗ್ ಚಾಲೆಂಜರ್ಸ್‌ ಎಫ್‌ಸಿ ಮತ್ತು ಎಂಇಜಿ ಆ್ಯಂಡ್ ಸೆಂಟರ್ ಎಫ್‌ಸಿ ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.