ಸಂತೋಷ್ ನಾಲ್ಕು ಗೋಲು: ಡಿವೈಇಎಸ್‌ ಎಫ್‌ಸಿ ಜಯಭೇರಿ ಬೆಂಗಳೂರು: ಸಂತೋಷ್ ತಮಾಟ ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಡಿವೈಇಎಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ಬಿ ಡಿವಿಷನ್‌ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಇಲ್ಲಿಯ ಬಿಎಫ್‌ಎಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಿ ಗುಂಪಿನ ಹಣಾಹಣಿಯಲ್ಲಿ 5–0 ಗೋಲುಗಳಿಂದ ಸನ್‌ರೈಸ್‌ ಎಫ್‌ಸಿ ತಂಡವನ್ನು ಮಣಿಸಿತು. ಲೆನಾಲ್ಡ್‌ ಕಾರ್ಲ್ ಮಾರ್ಕ್‌ (9ನೇ ನಿಮಿಷ) ವಿಜೇತ ತಂಡದ ಮೊದಲ ಗೋಲು ಹೊಡೆದರು. ಸಂತೋಷ್‌ 26, 35+2, 49 ಹಾಗೂ 70ನೇ ನಿಮಿಷಗಳಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಎಚ್ಎಎಲ್ ಎಫ್‌ಸಿ 8–0ಯಿಂದ ಬೆಂಗಳೂರು ಮಾರ್ಸ್‌ ತಂಡವನ್ನು ಪರಾಭವಗೊಳಿಸಿತು. ಎಚ್‌ಎಎಲ್‌ ತಂಡದ ರವಿತೇಜ ವೈ.ಆರ್‌. (47 ಹಾಗೂ 63ನೇ ನಿ.) ಎರಡು ಬಾರಿ ಕಾಲ್ಚಳಕ ತೋರಿದರು. ಮಲಿಕ್ ಲಾಜಿಂ (6ನೇ ನಿ.), ಸ್ವಮ್ಯ ಹಾರ್ದಿಕ ಸಿಂಗ್‌ (13ನೇ ನಿ.), ರೋಮನ್ ಸುಬ್ಬ (27ನೇ ನಿ.), ಶ್ಯಾಮ್ ಜೋಸ್ (35ನೇ ನಿ.), ಶಕತ್ ದಾಸ್‌ (45ನೇ ನಿ.) ಹಾಗೂ ಅಂಕಿತ್ ಕುಮಾರ್‌ (70+3ನೇ ನಿ.) ತಲಾ ಒಂದು ಗೋಲು ದಾಖಲಿಸಿದರು. ಎ ಗುಂಪಿನ ಪಂದ್ಯದಲ್ಲಿ ಮಹಮ್ಮಡನ್ ಸ್ಪೋರ್ಟಿಂಗ್ ಎಫ್‌ಸಿ 2–1ರಿಂದ ಆರ್‌.ಎಸ್‌. ಸ್ಪೋರ್ಟ್ಸ್ ತಂಡದ ವಿರುದ್ಧ ಗೆದ್ದಿತು. ಶನಿವಾರ ಮತ್ತು ಭಾನುವಾರ ವಿಶ್ರಾಂತಿ ದಿನಗಳಾಗಿದ್ದು ಯಾವುದೇ ಪಂದ್ಯಗಳು ನಡೆಯುವುದಿಲ್ಲ. ಸೋಮವಾರ ಎ ಡಿವಿಷನ್ ಪಂದ್ಯಗಳು ಆರಂಭವಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.