ಫುಟ್‌ಬಾಲ್‌: ಉಜ್ಬೆಕಿಸ್ತಾನಕ್ಕೆ ಮಣಿದ ಭಾರತ ಮಹಿಳಾ ತಂಡ ನವದೆಹಲಿ: ಪಂದ್ಯ ಮುಕ್ತಾಯದ ಹಂತದಲ್ಲಿದ್ದಾಗ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಭಾರತ ಮಹಿಳಾ ಫುಟ್‌ಬಾಲ್ ತಂಡ ಉಜ್ಬೆಕಿಸ್ತಾನ ಮಹಿಳೆಯರ ಎದುರಿನ ಸೌಹಾರ್ದ ‍ಪಂದ್ಯದಲ್ಲಿ 1–0 ಅಂತರದಲ್ಲಿ ಸೋಲನುಭವಿಸಿತು. ತಾಷ್ಕಂಟ್‌ನ ಎಜಿಎಂಕೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದ 87ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲಿ ಗೋಲು ಗಳಿಸಿದ ಮಫ್ತೂನಾ ಶೊಯಿಮೊವಾ ಆತಿಥೇಯರಿಗೆ ಗೆಲುವಿನ ಸವಿಯುಣ್ಣಿಸಿದರು ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ತಿಳಿಸಿದೆ. ಉಜ್ಬೆಕಿಸ್ತಾನ ಆರಂಭದಿಂದಲೇ ಆಕ್ರಮಣಕ್ಕೆ ಮುಂದಾಯಿತು. ಆದರೆ ಅದನ್ನು ಮೀರಿ ನಿಲ್ಲುವಲ್ಲಿ ಗೋಲ್‌ಕೀಪರ್ ಅದಿತಿ ಚೌಹಾಣ್‌ ಯಶಸ್ವಿಯಾದರು. ಲಯ ಕಂಡುಕೊಳ್ಳಲು ಸಮಯ ತೆಗೆದುಕೊಂಡ ಭಾರತ ತಂಡವೂ ಸ್ವಲ್ಪ ಸಮಯದ ನಂತರ ಪ್ರತಿ ದಾಳಿ ನಡೆಸಿತು. ಡಿಫೆಂಡರ್ ರಂಜನಾ ಚಾನು ಮತ್ತು ಮಿಡ್‌ಫೀಲ್ಡರ್ ಸಂಗೀತಾ ಬಾಸ್ಫೊರೆ ಅವರ ಹೊಂದಾಣಿಕೆಯ ಆಟದ ನೆರವಿನಿಂದ ಭಾರತಕ್ಕೆ 10 ನಿಮಿಷಗಳ ಒಳಗೆ ಉತ್ತಮ ಅವಕಾಶವೊಂದು ಲಭಿಸಿತ್ತು. ಆದರೆ ಎದುರಾಳಿ ತಂಡದ ಡಿಫೆಂಡರ್‌ಗಳನ್ನು ವಂಚಿಸಿ ಗೋಲು ಗಳಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಡಿಫೆಂಡರ್ ಸ್ವೀಟಿ ದೇವಿ ಅವರ ಸಮಯೋಚಿತ ಆಟದಿಂದ ಎದುರಾಳಿಗಳ ಪ್ರಯತ್ನವೂ ವಿಫಲವಾಯಿತು. 24ನೇ ನಿಮಿಷದಲ್ಲಿ ಉಜ್ಬೆಕಿಸ್ತಾನ ಆವರಣದಲ್ಲಿ ಆತಂಕ ಸೃಷ್ಟಿಸುವಲ್ಲಿ ಮನೀಷಾ ಯಶಸ್ವಿಯಾದರು. ಆದರೆ ಅವರು ಎಡಗಾಲಿನಿಂದ ಬಲವಾಗಿ ಒದ್ದ ಚೆಂಡು ಕ್ರಾಸ್ ಬಾರ್‌ಗೆ ತಾಗಿ ಹೊರಚಿಮ್ಮಿತು. ಕೆಲವೇ ನಿಮಿಷಗಳ ನಂತರ ಸೌಮ್ಯಾ ಗುಗುಲೋತ್ ಬಲಭಾಗದಿಂದ ಪ್ರಬಲ ಆಕ್ರಮಣ ನಡೆಸಿದರು. ಆದರೆ ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ದಯಾ ದೇವಿ ಮಿಂಚಿನ ಆಟ ಮೊದಲಾರ್ಧದ ಕೊನೆಯ ನಿಮಿಷಗಳಲ್ಲಿ ಆತಿಥೇಯರು ಮತ್ತಷ್ಟು ಚುರುಕಿನ ಆಟ ಪ್ರದರ್ಶಿಸಿದರು. ನಿಲುಫರ್ ಕುದ್ರತೊವಾ ಒದ್ದ ಚೆಂಡು ಕ್ರಾಸ್‌ ಬಾರ್‌ಗೆ ಸೋಕಿ ಸಾಗಿತು. ದ್ವಿತೀಯಾರ್ಧದಲ್ಲಿ ಪ್ಯಾರಿ ಬದಲಿಗೆ ಕಣಕ್ಕೆ ಇಳಿದ ದಯಾ ದೇವಿ ಮಿಂಚಿನ ಆಟದ ಮೂಲಕ ಗಮನ ಸೆಳೆದರು. ಸೌಮ್ಯಾ ಅವರ ನೆರವಿನಿಂದ ಎದುರಾಳಿಗಳ ರಕ್ಷಣಾ ಗೋಡೆ ಕೆಡವಿದ ಅವರು ಮೋಹಕ ಪಾಸ್ ಮೂಲಕ ಚೆಂಡನ್ನು ಡಂಗ್ಮೆ ಗ್ರೇಸ್‌ಗೆ ನೀಡುವಲ್ಲಿ ಯಶಸ್ವಿಯಾದರು. ಆದರೆ ಈ ಮೂವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಇದರ ಬೆನ್ನಲ್ಲೇ ಮನೀಷಾ ಮತ್ತು ರಂಜನಾ ಚಾನು ಜೋಡಿಯ ಅಮೋಘ ಆಟದಿಂದ ಭಾರತಕ್ಕೆ ಉತ್ತಮ ಅವಕಾಶವೊಂದು ಒದಗಿತ್ತು. ಇವರಿಬ್ಬರ ಪ್ರಯತ್ನದ ಫಲವಾಗಿ ಚೆಂಡು ದಯಾ ಅವರ ಬಳಿಗೆ ಸಾಗಿತು. ಮುನ್ನುಗ್ಗಿದ ದಯಾ ಅವರನ್ನು ನಿಯಂತ್ರಿಸುವಲ್ಲಿ ಉಜ್ಬೆಕಿಸ್ತಾನ ಯಶಸ್ವಿಯಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.