ಫುಟ್‌ಬಾಲ್‌: ರೆಬೆಲ್ಸ್‌, ಗಜಾನನ ಎಫ್‌ಸಿ ಜಯಭೇರಿ ಬೆಂಗಳೂರು: ರೆಬೆಲ್ಸ್ ಎಫ್‌ಸಿ ಮತ್ತು ಶ್ರೀ ಗಜಾನನ ಎಫ್‌ಸಿ ತಂಡಗಳು ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ‘ಬಿ’ ಡಿವಿಷನ್ ಲೀಗ್‌ನಲ್ಲಿ ಗುರುವಾರ ಭರ್ಜರಿ ಜಯ ಸಾಧಿಸಿದವು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ರೆಬೆಲ್ಸ್‌ 5–0ಯಿಂದ ಫ್ರೆಂಡ್ಸ್ ಯೂನಿಯನ್ ಎಫ್‌ಸಿಯನ್ನು ಮಣಿಸಿದರೆ ಶ್ರೀ ಗಜಾನನ 5–2ರಲ್ಲಿ ವೆಹಿಕಲ್ಸ್ ಎಫ್‌ಸಿ ವಿರುದ್ಧ ಜಯ ಸಾಧಿಸಿತು. ರೆಬೆಲ್ಸ್‌ಗಾಗಿ ಮೊಹಮ್ಮದ್ ರಮೀಫ್‌ 21 ಮತ್ತು 30ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸಂದೇಶ್ ಕೇಸರ್ 31 ಮತ್ತು 35ನೇ ನಿಮಿಷದಲ್ಲಿ, ಪುಳಕ್ ಬರುವಾ 54ನೇ ನಿಮಿಷದಲ್ಲಿ (ಪೆನಾಲ್ಟಿ) ಚೆಂಡನ್ನು ಗುರಿ ಮುಟ್ಟಿಸಿದರು. ಶ್ರೀ ಗಜಾನನಕ್ಕಾಗಿ ಸುರೀನ್‌ ಎಸ್‌ (27, 33ನೇ ನಿಮಿಷ), ಜಾಕಿ ಸುನಿಲ್ (43ನೇ ನಿ), ಭರತ್‌ ಎಂ (56ನೇ ನಿ), ಕಲೈವಣನ್‌ (59ನೇ ನಿ) ಗೋಲು ಗಳಿಸಿದರೆ ವೆಹಿಕಲ್ಸ್ ತಂಡಕ್ಕಾಗಿ ಕಾರ್ಲ್‌ಟನ್ ಜೊಯೆಲ್ (9ನೇ ನಿ) ಮತ್ತು ಕಾರ್ತಿಕ್ (70ನೇ ನಿ) ಗೋಲು ಗಳಿಸಿದರು. ಗೋವನ್ಸ್ ಎಫ್‌ಸಿ 2–1 ಗೋಲುಗಳಿಂದ ತಿಲಕ್ ಮೆಮೋರಿಯಲ್ ಎಫ್‌ಸಿಯನ್ನು ಮಣಿಸಿತು. ಗೋವನ್ಸ್‌ಗಾಗಿ ಕಿರಣ್ ಕುಮಾರ್ (45ನೇ ನಿ), ಐಮನ್ ಕುಸುಗಲ್ (55ನೇ ನಿ), ತಿಲಕ್ ಎಫ್‌ಸಿಗಾಗಿ ಸಮಿಕಿರಣ್ (11ನೇ ನಿ) ಚೆಂಡನ್ನು ಗುರಿಮುಟ್ಟಿಸಿದರು. ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಡಿವೈಇಎಸ್‌ ಎಫ್‌ಸಿ ತಂಡ ಸನ್‌ರೈಸ್ ಎಫ್‌ಸಿಯನ್ನು ಎದುರಿಸಲಿದ್ದು 3 ಗಂಟೆಗೆ ನಡೆಯಲಿರುವ ‘ಎ’ ಗುಂಪಿನ ಹಣಾಹಣಿಯಲ್ಲಿ ಎಚ್‌ಎಎಲ್‌ ಎಫ್‌ಸಿ ಬೆಂಗಳೂರು ಮಾರ್ಸ್‌ ಎಫ್‌ಸಿ ಎದುರು ಸೆಣಸಲಿದೆ. 4.30ಕ್ಕೆ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ಮತ್ತು ಎಂಡಿ ಸ್ಪೋರ್ಟಿಂಗ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.