ಕೋಪಾ ಅಮೆರಿಕ: ಅರ್ಜೆಂಟೀನಾಗೆ ಕೊಲಂಬಿಯಾ ಎದುರಾಳಿ ಬ್ರೆಸಿಲಿಯಾ, ಬ್ರೆಜಿಲ್: ಅರ್ಜೆಂಟೀನಾ ತಂಡ ಕೋಪಾ ಅಮೆರಿಕ ಟೂರ್ನಿಯ ಸೆಮಿಫೈನಲ್‌ ಹಣಾಹಣಿಯಲ್ಲಿ ಬುಧವಾರ ಕೊಲಂಬಿಯಾವನ್ನು ಎದುರಿಸಲಿದೆ. ಇದು, ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಲಯೊನೆಲ್ ಮೆಸ್ಸಿ ಅವರ 150ನೇ ಪಂದ್ಯ ಆಗಲಿದೆ. ಹೀಗಾಗಿ ಕುತೂಹಲ ಹೆಚ್ಚಿದೆ. ಟೂರ್ನಿಯಲ್ಲಿ ಈ ವರೆಗೆ ಮೆಸ್ಸಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಐದು ಪಂದ್ಯಗಳಲ್ಲಿ ನಾಲ್ಕು ಗೋಲು ಗಳಿಸಿರುವ ಅವರು ನಾಲ್ಕು ಅಸಿಸ್ಟ್‌ಗಳ ಮೂಲಕವೂ ಮಿಂಚಿದ್ದಾರೆ. ಶನಿವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಒಂದು ಗೋಲು ಗಳಿಸಿದ್ದರು. ಈ ಮೂಲಕ ಇಕ್ವಡೋರ್‌ ಎದುರು 3–0 ಅಂತರದ ಗೆಲುವಿಗೆ ಕಾರಣರಾಗಿದ್ದರು. 40ನೇ ನಿಮಿಷದಲ್ಲಿ ರಾಡ್ರಿಗೊ ಡಿ ಪಾಲ್ ಗಳಿಸಿದ ಗೋಲಿನ ಮೂಲಕ ಅರ್ಜೆಂಟೀನಾ ಮುನ್ನಡೆ ಸಾಧಿಸಿತು. ಲೌಟಾರೊ ಮಾರ್ಟಿನೆಜ್ 84ನೇ ನಿಮಿಷದಲ್ಲಿ ಗಳಿಸಿದ ಗೋಲಿನೊಂದಿಗೆ ತಂಡದ ಮುನ್ನಡೆ ಹೆಚ್ಚಿತು. ಇಂಜುರಿ ಅವಧಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಲಯೊನೆಲ್ ಮೆಸ್ಸಿ ಗೆಲುವಿನ ಅಂತರ ಹೆಚ್ಚಿಸಿದರು. ಪಂದ್ಯ ಆರಂಭ: ಬೆಳಿಗ್ಗೆ 6.30 (ಭಾರತೀಯ ಕಾಲಮಾನ) ನೇರ ಪ್ರಸಾರ: ಸೋನಿ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.