ಫುಟ್‌ಬಾಲ್‌: ಪ್ರೇಮ್ ಹ್ಯಾಟ್ರಿಕ್‌ ಬೆಂಗಳೂರು: ಪ್ರೇಮ್ ಅವರು ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಅಗ್ನಿಪುತ್ರ ಎಫ್‌ಸಿ ತಂಡವು ಜಯ ಗಳಿಸಿತು. ಇಲ್ಲಿ ನಡೆಯುತ್ತಿರುವ ಕೆಎಸ್‌ಎಫ್ಎ–ಬಿಡಿಎಫ್‌ಎ ‘ಸಿ‘ ಡಿವಿಷನ್ ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಆ ತಂಡವು 4–0ಯಿಂದ ಶುಭೋದಯ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರ ಪ್ರೇಮ್‌ 33, 49 ಮತ್ತು 54ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಇನ್ನೊಂದು ಗೋಲನ್ನು ರಮೇಶ್ ಕುಮಾರ್ (26ನೇ ನಿಮಿಷ) ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ವೀರಾವಥ್‌ ರೆಡ್ಡಿ ಅವರು ಗಳಿಸಿದ ಎರಡು ಗೋಲುಗಳು ಬಲಹಾರ್ಕ ಎಫ್‌ಸಿ ತಂಡದ ಗೆಲುವಿಗೆ ಕಾರಣವಾದವು. ಆ ತಂಡವು ಫ್ರಾನ್ಸಿಸ್‌ ಜೇವಿಯರ್ ಎಫ್‌ಸಿ ತಂಡವನ್ನು3–0ಯಿಂದ ಪರಾಭವಗೊಳಿಸಿತು. ವೀರಾವಥ್‌ ನಾಲ್ಕು ಹಾಗೂ 36ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. 53ನೇ ನಿಮಿಷದಲ್ಲಿ ಸುಹಾಸ್ ಎಂ. ಮತ್ತೊಂದು ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಲೆಜೆಂಡರಿ ಡಿ ಸ್ಪೋರ್ಟಿಂಗ್‌ ಎಫ್‌ಸಿ ತಂಡವು 1–0ಯಿಂದ ಗಾರ್ಡನ್ ಎಫ್‌ಸಿಯನ್ನು ಸೋಲಿಸಿತು. ಡಿ ಸ್ಪೋರ್ಟಿಂಗ್‌ ತಂಡದ ನಿರ್ಮಲ್ ಕುಮಾರ್ (23ನೇ ನಿಮಿಷ) ಕಾಲ್ಚಳಕ ತೋರಿದರು. ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ವಿಜಯನಗರ ಯುನೈಟೆಡ್ ಎಫ್‌ಸಿ– ಛತ್ರಪತಿ ಶಿವಾಜಿ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. ಬಳಿಕ, ಚಿನ್ನಪ್ಪ ಗಾರ್ಡನ್ ಎಫ್‌ಸಿ–ಒಲಿಂಪಿಯನ್ ರಾಮನ್ ಎಫ್‌ಸಿ, ಕಿಕ್‌ಸ್ಟಾರ್ಟ್‌ ಅಕಾಡೆಮಿ–ರೊನಾಲ್ಡೊ ಎಫ್‌ಸಿ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.