ಮೆಸ್ಸಿ ಹಿಂದಿಕ್ಕಿದ ಕ್ರಿಸ್ಟಿಯಾನೊ ರೊನಾಲ್ಡೊ ಬೆಂಗಳೂರು (ರಾಯಿಟರ್ಸ್): ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಫಾರ್ವರ್ಡ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಫೋರ್ಬ್ಸ್‌ ನಿಯತಕಾಲಿಕೆಯು ಬಿಡುಗಡೆ ಮಾಡಿರುವ ಶ್ರೀಮಂತ ಕ್ರೀಡಾಪಟುಗಳಲ್ಲಿ ಅತಿ ಹೆಚ್ಚುಆದಾಯ ಪಡೆಯುವ ಫುಟ್‌ಬಾಲ್ ತಾರೆಯಾಗಿದ್ದಾರೆ. ಪೋರ್ಚುಗಲ್‌ನ ರೊನಾಲ್ಡೊ ಅವರು ಅರ್ಜೆಂಟಿನಾದ ತಾರೆ ಲಯೊನೆಲ್‌ ಮೆಸ್ಸಿಯನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೇರಿದ್ದಾರೆ. ಹೋದ ಆಗಸ್ಟ್‌ನಲ್ಲಿ ರೊನಾಲ್ಡೊ ಯುವೆಂಟಿಸ್‌ನಿಂದ ಯುನೈಟೆಡ್ ತಂಡಕ್ಕೆ ಮರಳಿದ್ದರು. ಈಚೆಗೆ ಮೆಸ್ಸಿ ಕೂಡ ತಾವು ಬಹುಕಾಲ ಪ್ರತಿನಿಧಿಸಿದ್ದ ಬಾರ್ಸಿಲೋನಾ ಕ್ಲಬ್ ತೊರೆದು ಪ್ಯಾರಿಸ್ ಸೇಂಟ್ ಜರ್ಮೇನ್ (ಪಿಎಸ್‌ಜಿ) ತಂಡ ಸೇರಿದ್ದರು. ‘ರೊನಾಲ್ಡೊ ವಿಶ್ವದ ಅತ್ಯಂತ ಜನಪ್ರಿಯ ಫುಟ್‌ಬಾಲ್ ತಾರೆಯಾಗಿದ್ದಾರೆ. ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್‌ಗಳಲ್ಲಿ ಅವರಿಗೆ 50 ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದಾರೆ. 2021–22ರ ಋತುವಿನಲ್ಲಿ ಅವರು ₹ 942 ಕೋಟಿ (ತೆರಿಗೆ ಕಡಿತಕ್ಕೂ ಮುನ್ನ) ಆದಾಯ ಗಳಿಸಿದ್ದಾರೆ. ಅದರಲ್ಲಿ ಯುನೈಟೆಡ್ ತಂಡದಿಂದ ಪಡೆದ ಸುಮಾರು ₹ 500 ಕೋಟಿ ಮೊತ್ತದ ವೇತನ ಮತ್ತು ಬೋನಸ್‌ಗಳೂ ಸೇರಿವೆ. ಉಳಿದಂತೆ ನೈಕಿ, ಹರ್ಬ್‌ಲೈಫ್, ಕ್ಲಿಯರ್ ಮತ್ತು ತಮ್ಮದೇ ಬ್ರ್ಯಾಂಡ್ ಸಿಆರ್‌7 ಒಪ್ಪಂದಗಳಿಂದ ಬರುವ ಆದಾಯವೂ ಇದರಲ್ಲಿದೆ’ ಎಂದು ಫೋರ್ಬ್ಸ್‌ ಹೇಳಿದೆ. ಪಿಎಸ್‌ಜಿಯಲ್ಲಿ ಮೆಸ್ಸಿ ಜೊತೆಗೆ ಆಡುವ ನೇಯ್ಮರ್, ಕೈಲಿಯನ್ ಎಂಬಾಪೆ ಕೂಡ ಅಗ್ರ ಐವರು ಶ್ರೀಮಂತ ಫುಟ್‌ಬಾಲ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಆದಾಯ (₹ ಕೋಟಿಗಳಲ್ಲಿ) ಕ್ರಿಸ್ಟಿಯಾನೊ ರೊನಾಲ್ಡೊ; 942 ಲಯೊನೆಲ್ ಮೆಸ್ಸಿ; 811 ನೇಯ್ಮರ್; 700 ಕೈಲಿಯನ್ ಎಂಬಾಪೆ; 316 ಮೊಹಮ್ಮದ್ ಸಲಾಹ; 302 ರಾಬರ್ಟ್‌ ಲೆವಾಂಡೊಸ್ಕಿ; 258 ಆ್ಯಂಡ್ರೆಸ್ ಐನಿಸ್ಟಾ; 258 ಪಾಲ್ ಪೊಗ್ಬಾ; 250 ಗೆರೆತ್ ಬೆಲ್; 235 ಈಡನ್ ಹಜಾರ್ಡ್; 213 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.