ಎಸ್‌ಎಫ್‌ಎ ಮಹಿಳಾ ‘ಎ’ ಡಿವಿಷನ್ ಲೀಗ್‌: ಮಾಡರ್ನ್‌ ಗರ್ಲ್ಸ್‌ಗೆ ಚಾಂಪಿಯನ್ ಪಟ್ಟ ಬೆಂಗಳೂರು: ಆರುಷಿ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಮಾಡರ್ನ್ ಗರ್ಲ್ಸ್‌ ಎಫ್‌ಸಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟವು. ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಪ್ಲಾನೆಟ್ ಟ್ರೋಫಿ ಮಹಿಳಾ ‘ಎ’ ಡಿವಿಷನ್ ಲೀಗ್‌ನ ಫೈನಲ್‌ನಲ್ಲಿ ರೂಟ್ಸ್‌ ಫುಟ್‌ಬಾಲ್ ಸ್ಕೂಲ್ ತಂಡವನ್ನು 3–1ರಲ್ಲಿ ಮಾಡರ್ನ್ ಗರ್ಲ್ಸ್‌ ಮಣಿಸಿತು. ಏಳನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಆರುಷಿ, ಮಾಡರ್ನ್ ಗರ್ಲ್ಸ್‌ ಬಳಗದಲ್ಲಿ ಭರವಸೆ ಮೂಡಿಸಿದ್ದರು. 10ನೇ ನಿಮಿಷದಲ್ಲಿ ಶ್ರವ್ಯ ಗಳಿಸಿದ ಗೋಲಿನ ಮೂಲಕ ರೂಟ್ಸ್ ತಿರುಗೇಟು ನೀಡಿತು. ನಂತರದ 30 ನಿಮಿಷಗಳಲ್ಲಿ ಎರಡೂ ತಂಡಗಳು ಪ್ರಬಲ ಪೈಪೋಟಿ ನಡೆಸಿದವು. 40ನೇ ನಿಮಿಷದಲ್ಲಿ ಮಾಡರ್ನ್ ಗರ್ಲ್ಸ್‌ ಯಶಸ್ಸು ಕಂಡಿತು. ಆರುಷಿ ಎರಡನೇ ಗೋಲು ಗಳಿಸಿ ಮಿಂಚಿದರು. 48ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಅವರು ಹ್ಯಾಟ್ರಿಕ್ ಪೂರೈಸುವುದರೊಂದಿಗೆ ತಂಡದ ಜಯವನ್ನೂ ಖಾತರಿ ಮಾಡಿಕೊಂಡರು. ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಆರುಷಿ ಪಾಲಾಯಿತು. ರೂಟ್ಸ್ ಎಫ್‌ಸಿಯ ಕೃತಿಕಾ ಉತ್ತಮ ಗೋಲ್‌ಕೀಪರ್ ಪ್ರಶಸ್ತಿ ಗಳಿಸಿದರೆ ಮಾಡರ್ನ್ ಗರ್ಲ್ಸ್‌ ಎಫ್‌ಸಿಯ ಸಿಮ್ರಾನ್ ಭಾರ್ಗವ ಉತ್ತಮ ಡಿಫೆಂಡರ್ ಎನಿಸಿಕೊಂಡರು. ಇದೇ ತಂಡದ ಮೈತ್ರೇಯಿ ಉತ್ತಮ ಮಿಡ್‌ಫೀಲ್ಡರ್ ಪ್ರಶಸ್ತಿಗೆ ಭಾಜನರಾದರು. ಉತ್ತಮ ಫಾರ್ವರ್ಡ್‌ ಪ್ರಶಸ್ತಿ ಶ್ರವ್ಯ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.