ಇಂಡಿಯನ್ ಸೂಪರ್ ಲೀಗ್ : ತಿರುಗೇಟು ನೀಡುವ ತವಕದಲ್ಲಿ ಎಟಿಕೆಎಂಬಿ ವಾಸ್ಕೊ: ಹೋದ ಆವೃತ್ತಿಯ ಪ್ರಶಸ್ತಿ ಸುತ್ತಿನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವು ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಂಗಳವಾರ ಎದುರಿಸಲಿದೆ. ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ (ಐಎಸ್‌ಎಲ್‌) ಟೂರ್ನಿಯ ಈ ಪಂದ್ಯವು ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಕೋಲ್ಕತ್ತ ಎದುರು ಜಯಿಸಿದ್ದ ಮುಂಬೈ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ‘ಲೀಗ್‌ ವಿಜೇತರು’ ಪಟ್ಟವನ್ನೂ ತನ್ನದಾಗಿಸಿಕೊಂಡಿತ್ತು. ಈ ಬಾರಿ ಪರಿಸ್ಥಿತಿ ಕೊಂಚ ಭಿನ್ನವಾಗಿದೆ. ಈ ಹಿಂದೆ ಮುಂಬೈ ತಂಡದ ಪ್ರಮುಖ ಆಟಗಾರನಾಗಿದ್ದ ಹ್ಯೂಗೊ ಬೌಮೋಸ್ ಈ ಆವೃತ್ತಿಯಲ್ಲಿ ಎಟಿಕೆಎಂಬಿ ತಂಡದ ಪ್ರಮುಖ ದಾಳಿಗಾರನಾಗಿದ್ದಾರೆ. ನಾಯಕ ರಾಯ್‌ ಕೃಷ್ಣ ಬಲವೂ ತಂಡಕ್ಕಿದೆ. ಕಳೆದ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಎದುರು 3–0ಯಿಂದ ಗೆದ್ದಿರುವ ಎಟಿಕೆಎಂಬಿ ಆತ್ಮವಿಶ್ವಾಸದ ಗಣಿಯಾಗಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಎದುರು 1–3ರಿಂದ ನಿರಾಸೆ ಅನುಭವಿಸಿರುವ ಚಾಂಪಿಯನ್‌ ಮುಂಬೈ ಸಿಟಿ ಕೂಡ ಪುಟಿದೇಳುವ ಛಲದಲ್ಲಿದೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.