ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಭರ್ಜರಿ ಗೆಲುವು ಬೆಂಗಳೂರು: ಧನುಷ್, ಪ್ರಿನ್ಸ್‌ವಿಲ್ ಮತ್ತು ಸುಧೀರ್ ಗಳಿಸಿದ ತಲಾ ಎರಡು ಗೋಲುಗಳ ಬಲದಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ 7–0ಯಿಂದ ಎಡಿಇ ಎಫ್‌ಸಿಯನ್ನು ಮಣಿಸಿತು. ಡಿ.ಧನುಷ್ 34 ಮತ್ತು 89ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಪ್ರಿನ್ಸ್‌ವಿಲ್ ಎಮಾಕ 36 ಹಾಗೂ 66ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರೆ ಸುಧೀರ್ ಕೋಟಿಕೇಲ 73 ಮತ್ತು 80ನೇ ನಿಮಿಷಗಳಲ್ಲಿ ಯಶಸ್ಸು ಕಂಡರು. ಒಂದು ಗೋಲು ಅಂಕಿತ್ (58ನೇ ನಿ) ಅವರಿಂದ ಬಂತು. ಥಾಂಕೋಸ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಎದುರಿನ ಪಂದ್ಯದಲ್ಲಿ ಎಎಸ್‌ಸಿ ಮತ್ತು ಸೆಂಟರ್‌ ಎಫ್‌ಸಿ 1–0 ಅಂತರದಲ್ಲಿ ಜಯ ಗಳಿಸಿತು. 64ನೇ ನಿಮಿಷದಲ್ಲಿ ಸರೋಜ್ ರಾಯ್‌ ಪಂದ್ಯದ ಏಕೈಕ ಗೋಲು ಗಳಿಸಿದರು. ಬೆಂಗಳೂರು ಯುನೈಟೆಡ್‌ ಎಫ್‌ಸಿ 1–0ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿಯನ್ನು ಸೋಲಿಸಿತು. ಗಯ್ ಹರ್ಮನ್ ಬೆಲೆಕ್‌ (7ನೇ ನಿ) ಗೋಲು ಗಳಿಸಿದರು. ಶನಿವಾರ ಬೆಳಿಗ್ಗೆ 11.45ಕ್ಕೆ ಕಿಕ್‌ಸ್ಟಾರ್ಟ್ ಎಫ್‌ಸಿ ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿಯನ್ನು ಎದುರಿಸಲಿದೆ. ಥಾಂಕೋಸ್ ಸ್ಟೂಡೆಂಟ್ಸ್‌ ಯೂನಿಯನ್ ಎಫ್‌ಸಿ ಮತ್ತು ಎಡಿಇ ಎಫ್‌ಸಿ ನಡುವಿನ ಪಂದ್ಯ ಮಧ್ಯಾಹ್ನ 1.45ಕ್ಕೆ ನಡೆಯಲಿದ್ದು 3.45ಕ್ಕೆ ಜವಾಹರ್ ಯೂನಿಯನ್ ಎಫ್‌ಸಿ ಮತ್ತು ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.