ಬೆಲಿನೆನ್ಸಸ್‌ ಆಟಗಾರರಿಗೆ ಓಮೈಕ್ರಾನ್ ಲಿಸ್ಬನ್: ಪೋರ್ಚುಗೀಸ್‌ನ ಬೆಲಿನೆನ್ಸಸ್‌ ಫುಟ್‌ಬಾಲ್ ಕ್ಲಬ್‌ನ 13 ಆಟಗಾರರಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕಿಗೆ ಓಮೈಕ್ರಾನ್ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ. ಸೋಂಕು ಕಾಣಿಸಿಕೊಂಡಿರುವ ಕಾರಣ ಬೆನ್ಫಿಕಾ ಎದುರಿನ ಈ ತಂಡದ ‍ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ತಂಡದ ಆಟಗಾರರಲ್ಲಿ ಓಮೈಕ್ರಾನ್ ವೈರಸ್ ಸೋಂಕು ಇರುವ ಸಾಧ್ಯತೆ ಇದೆ ಎಂದು ಪೋರ್ಚುಗಲ್‌ನ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ. ಇದು ಖಚಿತವಾದರೆ ಪೋರ್ಚುಗಲ್‌ನಲ್ಲಿ ಕಾಣಿಸಿಕೊಂಡ ಹೊಸ ತಳಿಯ ಮೊದಲ ಪ್ರಕರಣ ಆಗಲಿದೆ. ಬೆಲಿನೆನ್ಸಸ್‌ ಕ್ಲಬ್‌ನ ಆಟಗಾರರು ಈಚೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು ಅಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪೋರ್ಚುಗಲ್ ಲೀಗ್‌ನ ಅಧಿಕಾರಿಗಳು ಭಾನುವಾರ ಸಭೆ ಸೇರಿ ಮುಂದಿನ ಪಂದ್ಯಗಳನ್ನು ನಡೆಸುವುದರ ಬಗ್ಗೆ ಚರ್ಚಿಸಿದ್ದಾರೆ. ಓಮೈಕ್ರಾನ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯುರೋಪ್‌ನಿಂದ ಏಷ್ಯಾ ವರೆಗಿನ ಅನೇಕ ರಾಷ್ಟ್ರಗಳು ದಕ್ಷಿಣ ಆಫ್ರಿಕಾ ಮತ್ತು ನೆರೆಯ ರಾಷ್ಟ್ರಗಳಿಂದ ಪ್ರಯಾಣಿಸುವವರ ಮೇಲೆ ನಿರ್ಬಂಧ ಹೇರಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.