ಸೂಪರ್ ಡಿವಿಷನ್ ಫುಟ್‌ಬಾಲ್‌: ಈಗಲ್ಸ್ ಜಯಭೇರಿ ಬೆಂಗಳೂರು: ಮೊದಲಾರ್ಧದಲ್ಲೇ ಎರಡು ಗೋಲು ಗಳಿಸಿದ ಬೆಂಗಳೂರು ಈಗಲ್ಸ್ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಶ್ರಯದ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಜಯ ಗಳಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ ಈಗಲ್ಸ್‌ 2–0ಯಿಂದ ಯಂಗ್ ಚಾಲೆಂಜರ್ಸ್‌ ಎಫ್‌ಸಿಯನ್ನು ಮಣಿಸಿತು. ಡೋರ್ಜಿ ವಾಂಘು ಖೊಂಗ್‌ 15ನೇ ನಿಮಿಷದಲ್ಲಿ ಮತ್ತು ಕ್ಲೀಟಸ್ ಡೊಮಿನಿಕ್ ಜೇಕಬ್ 36ನೇ ನಿಮಿಷದಲ್ಲಿ ಗೋಲು ಗಳಿಸಿದರು. ಎಂಇಜಿ–ಸೆಂಟರ್‌ ಎಫ್‌ಸಿ ಹಾಗೂ ಕೊಡಗು ಎಫ್‌ಸಿ ನಡುವಿನ ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು. ಎಂಇಜಿ ಪರವಾಗಿ ರೋಹಿತ್‌ ಸಿ.ಎಂ (64ನೇ ನಿಮಿಷ) ಮತ್ತು ಅರ್ಜುನ್ ಮಧು (71ನೇ ನಿ) ಗೋಲು ಗಳಿಸಿದರೆ ಸಂಜಯ್‌ ಭುಟಿಯಾ (5ನೇ ನಿ) ಮತ್ತು ವಿನು ಎಚ್‌.ಆರ್‌ (32ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು. ಥಾಂಕೋಸ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಮತ್ತು ಬೆಂಗಳೂರು ಯುನೈಟೆಡ್ ಎಫ್‌ಸಿ ನಡುವಿನ ಪಂದ್ಯವೂ 2–2ರಲ್ಲಿ ಡ್ರಾ ಆಯಿತು. ಸುಬಿನ್ ರಾಜ್ (35ನೇ ನಿ), ಸುಜಿತ್ ಕುಮಾರ್ (75ನೇ ನಿ) ಥಾಂಕೋಸ್ ಪರವಾಗಿ, ಗಯ್‌ ಹೆರ್ಮನ್ ಅಟಿಮೆಲೆ (26, 31ನೇ ನಿ) ಬೆಂಗಳೂರು ಯುನೈಟೆಡ್ ಪರವಾಗಿ ಗೋಲು ಗಳಿಸಿದರು. ಬೊಯ್ಕಾ ಅಕಾಡೆಮಿಗೆ ಭರ್ಜರಿ ಗೆಲುವು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಯೂತ್ ಪ್ರೀಮಿಯರ್ ಲೀಗ್‌ 17 ವರ್ಷದೊಳಗಿನವರ ಟೂರ್ನಿಯ ಪಂದ್ಯದಲ್ಲಿ ಬೊಯ್ಕಾ ಅಕಾಡೆಮಿ 5–1ರಲ್ಲಿ ಕ್ಯಾಪ್ ಫುಟ್‌ಬಾಲ್ ಅಕಾಡೆಮಿಯನ್ನು ಸೋಲಿಸಿತು. ಪವಿತ್ರನ್ (30ನೇ ನಿ), ಸಂತೋಷ್ (40, 47ನೇ ನಿ), ಪ್ರಖ್ಯಾತ್‌ (72ನೇ ನಿ) ಮತ್ತು ಗೌತಮ್ (90ನೇ ನಿ) ಬೊಯ್ಕಾ ಪರ ಯಶಸ್ಸು ಸಾಧಿಸಿದರು. ಕ್ಯಾಪ್‌ಗಾಗಿ ಅನೂಪ್ (48ನೇ ನಿ) ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.