ಬಿಎಫ್‌ಸಿಗೆ ನಾರ್ತ್ ಈಸ್ಟ್‌ ಯುನೈಟೆಡ್‌ ಸವಾಲು ಬ್ಯಾಂಬೊಲಿಮ್‌: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಹೊಸ ಕನಸಿನೊಂದಿಗೆ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡ ಶನಿವಾರ ಕಣಕ್ಕೆ ಇಳಿಯಲಿದೆ. ಎಂಟನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಸೆಣಸಲಿದೆ. ಮಾಜಿ ಚಾಂಪಿಯನ್ ಬಿಎಫ್‌ಸಿ ಹಿಂದಿನ ಎರಡು ಆವೃತ್ತಿಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. 2017ರಿಂದ ಟೂರ್ನಿಯಲ್ಲಿ ಆಡುತ್ತಿರುವ ತಂಡ ಒಮ್ಮೆಯೂ ಕಳೆದ ಬಾರಿ ಮೊದಲ ಸಲ ಸೆಮಿಫೈನಲ್ ಪ್ರವೇಶಿಸದೇ ವಾಪಸ್ ಆಗಿತ್ತು. ಕಳೆದ ಆವೃತ್ತಿ ಮುಗಿದ ಕೂಡಲೇ ಮಾರ್ಕೊ ಪೆಜೊವೊಲಿ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಂಡಿರುವ ತಂಡ ಅಂದಿನಿಂದಲೇ ರಣತಂತ್ರಗಳನ್ನು ಹೂಡುತ್ತ ಬಂದಿದೆ. 52 ವರ್ಷದ ಮಾರ್ಕೊ ಅವರ ಮಾರ್ಗದರ್ಶನದಲ್ಲಿ ತಂಡ ಯಶಸ್ಸು ಕಾಣುವುದೇ ಎಂಬ ಕುತೂಹಲ ಈಗ ಫುಟ್‌ಬಾಲ್ ಪ್ರೇಮಿಗಳನ್ನು ಕಾಡುತ್ತಿದೆ. ಪದಾರ್ಪಣೆ ಮಾಡಿದ ವರ್ಷ ಫೈನಲ್ ಪ್ರವೇಶಿಸಿದ್ದ ಬಿಎಫ್‌ಸಿ ತಂಡ ರನ್ನರ್ ಅಪ್ ಆಗಿತ್ತು. ಮುಂದಿನ ವರ್ಷ ಚಾಂಪಿಯನ್ ಆಗಿತ್ತು. ಅದರ ನಂತರದ ಆವೃತ್ತಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿ ’ಹ್ಯಾಟ್ರಿಕ್ ಸೆಮಿಫೈನಲ್‘ ಸಾಧನೆ ಮಾಡಿತ್ತು. ಈ ಬಾರಿ ನಾಯಕನಾಗಿ ಸುನಿಲ್ ಚೆಟ್ರಿ ಅವರನ್ನು ಮುಂದುವರಿಸಲಾಗಿದೆ. ತಂಡದ ಆಡಳಿತ ತಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ಅವರು ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.