: ಈಸ್ಟ್ ಬೆಂಗಾಲ್‌ಗೆ ಜೆಮ್ಶೆಡ್‌ಪುರ ಸವಾಲು ಬೆಂಗಳೂರು: ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಐಎಸ್‌ಎಲ್‌ ಟೂರ್ನಿಯ ಎಂಟನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಜೆ‌ಮ್ಶೆಡ್‌ಪುರ ಎಫ್‌ಸಿಯನ್ನು ಭಾನುವಾರ ಎದುರಿಸಲಿದೆ. ಗೋವಾದ ತಿಲಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಮುಂದಿನ ಶನಿವಾರ ಎಟಿಕೆ ಮೋಹನ್ ಬಾಗನ್ ಎದುರು ನಡೆಯಲಿರುವ ಕೋಲ್ಕತ್ತ ಡರ್ಬಿಗೆ ಮೊದಲಿನ ’ಅಭ್ಯಾಸ‘ವಾಗಲಿದ್ದು ಜಯದ ಮೂಲಕ ಭರವಸೆ ಹೆಚ್ಚಿಸಿಕೊಳ್ಳಲು ತಂಡ ಪ್ರಯತ್ನಿಸಲಿದೆ. ಕಳೆದ ಬಾರಿ ಈಸ್ಟ್ ಬೆಂಗಾಲ್ 20 ಪಂದ್ಯಗಳ ಪೈಕಿ ಕೇವಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ ಮೂಲಕ ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು. ಹೀಗಾಗಿ ಈ ವರ್ಷ ಜಯದ ಮೂಲಕ ಅಭಿಯಾನ ಆರಂಭಿಸುವ ಉದ್ದೇಶವೂ ತಂಡಕ್ಕಿದೆ. ಜೆಮ್ಶೆಡ್‌ಪುರ ಕಳೆದ ಆವೃತ್ತಿಯಲ್ಲಿ ಅಮೋಘ ಆಟವಾಡಿತ್ತು. ಕೇವಲ ನಾಲ್ಕು ಪಾಯಿಂಟ್‌ಗಳಿಂದ ಸೆಮಿಫೈನಲ್ ಅವಕಾಶ ಕಳೆದುಕೊಂಡಿದ್ದ ತಂಡ ಒಟ್ಟಾರೆ ಆರನೇ ಸ್ಥಾನ ಗಳಿಸಿತ್ತು. ಈ ವರ್ಷ ಮತ್ತೆ ಗೆಲುವಿನ ಓಟ ಮುಂದುವರಿಸಲು ತಂಡ ಪ್ರಯತ್ನಿಸಲಿದೆ. ಹೀಗಾಗಿ ಈ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.