ಬಿಎಫ್‌ಸಿಗೆ ಗೆಲುವಿನ ಲಯ ಮುಂದುವರಿಸುವ ತವಕ ವಾಸ್ಕೊ: ಜಯದ ಲಯ ಮುಂದುವರಿಸುವ ತವಕದಲ್ಲಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಬುಧವಾರ ಒಡಿಶಾ ಸವಾಲು ಎದುರಿಸಲಿದೆ. ಸುನಿಲ್ ಚೆಟ್ರಿ ನೇತೃತ್ವದ ತಂಡವು ಐಎಸ್‌ಎಲ್‌ನಲ್ಲಿ ಎಂಟು ಬಾರಿ ಒಡಿಶಾವನ್ನು ಎದುರಿಸಿದೆ. ಐದರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಪಂದ್ಯ ನಡೆಯುವ ಇಲ್ಲಿಯ ತಿಲಕ್ ಕ್ರೀಡಾಂಗಣವು ಬಿಎಫ್‌ಸಿಗೆ ನೆಚ್ಚಿನ ಅಂಗಣವಾಗಿದೆ. ಬಿಎಫ್‌ಸಿ ತನ್ನ ಮೊದಲ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡವನ್ನು 4–2ರಿಂದ ಮಣಿಸಿ ಶುಭಾರಂಭ ಮಾಡಿತ್ತು. ‘ನಾವು ನಮ್ಮ ಆಟದ ಮೇಲೆ ಗಮನಹರಿಸುತ್ತೇವೆ. ಹಿಂದಿನ ಪಂದ್ಯದಲ್ಲಿನ ಉತ್ತಮವಾದ ಅಂಶಗಳನ್ನು ತೆಗೆದುಕೊಂಡು, ಈ ಪಂದ್ಯದಲ್ಲಿ ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಸುಧಾರಿಸಿಕೊಳ್ಳುತ್ತೇವೆ. ನಮ್ಮ ಬಳಿ ಈಗ ಮೂರು ಪಾಯಿಂಟ್‌ಗಳಿವೆ. ಗೆಲುವಿನ ಸೌಧವನ್ನು ಕಟ್ಟಬೇಕಿದೆ‘ ಎಂದು ಬೆಂಗಳೂರು ಮುಖ್ಯ ಕೋಚ್ ಮಾರ್ಕೊ ಪೆಜೌಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಬೆಂಗಳೂರು ತಂಡದ ಬಳಿ ಉತ್ತಮ ಆಟಗಾರರಿದ್ದಾರೆ. ತಂಡದ ಹೆಸರಿನಲ್ಲಿ ಉತ್ತಮ ದಾಖಲೆಯೂ ಇದೆ. ಇದು ಸವಾಲಿನ ಪಂದ್ಯವಾಗಿದ್ದರೂ ನಾವು ಸಜ್ಜಾಗಿದ್ದೇವೆ‘ ಎಂದು ಒಡಿಶಾ ತಂಡದ ಕೋಚ್‌ ಕಿಕೊ ರೆಮಿರೆಜ್‌ ನುಡಿದರು. ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.