ಸಂತೋಷ್‌ ಟ್ರೋಫಿ: ಸುಧೀರ್‌ ಮಿಂಚು, ಕರ್ನಾಟಕ ಶುಭಾರಂಭ ಬೆಂಗಳೂರು: ಸುಧೀರ್ ಕೋಟಿಕೇಲ ಗಳಿಸಿದ ಎರಡು ಗೋಲುಗಳ ಬಲದಿಂದ ಕರ್ನಾಟಕ ತಂಡವು ಸಂತೋಷ್‌ ಟ್ರೋಫಿ ಫುಟ್‌ಬಾಲ್ ದಕ್ಷಿಣ ವಲಯ ಅರ್ಹತಾ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ‘ಎ‘ ಗುಂಪಿನ ಅರ್ಹತಾ ಪಂದ್ಯದಲ್ಲಿ 4–0 ಗೋಲುಗಳಿಂದ ತಮಿಳುನಾಡು ತಂಡವನ್ನು ಪರಾಭವಗೊಳಿಸಿತು. ರಾಜ್ಯ ತಂಡದ ಪರ ಕಮಲೇಶ್ ಗೋಲಿನ ಖಾತೆ ತೆರೆದರು. 11ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ಅವರು ತಂಡಕ್ಕೆ ಮುನ್ನಡೆ ತಂದುಕೊಟ್ಟರು. 42ನೇ ನಿಮಿಷದಲ್ಲಿ ತಮ್ಮ ಮೊದಲ ಗೋಲು ಹೊಡೆದ ಸುಧೀರ್‌ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಅದೇ ಲಯವನ್ನು ಮುಂದುವರಿಸಿದ ಅವರು 53ನೇ ನಿಮಿಷದಲ್ಲಿ ಮತ್ತೊಂದು ಸೊಗಸಾದ ಗೋಲು ದಾಖಲಿಸಿದರು. ಈ ಹಂತದಲ್ಲಿ ಆಟ ರಂಗೇರಿತು. ತಮಿಳುನಾಡು ತಂಡದ ಆಟಗಾರರೂ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ 75ನೇ ನಿಮಿಷದಲ್ಲಿ ಅಂಕಿತ್‌. ಪಿ. ಯಶಸ್ಸು ಸಾಧಿಸುವುದರೊಂದಿಗೆ ಕರ್ನಾಟಕದ ಗೋಲು ಗಳಿಕೆ ನಾಲ್ಕಕ್ಕೆ ಹೆಚ್ಚಿತು; ತಂಡದ ಜಯವೂ ಖಚಿತವಾಯಿತು. ಗುರುವಾರ ನಡೆಯುವ ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶ–ಕರ್ನಾಟಕ ಮತ್ತು ಎರಡನೇ ಪಂದ್ಯದಲ್ಲಿ ತಮಿಳುನಾಡು–ತೆಲಂಗಾಣ ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.