ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಒಡಿಶಾ ಮಣಿಸಿದ ಜೆಎಫ್‌ಸಿ ವಾಸ್ಕೊ: ಸ್ಕಾಟ್ಲೆಂಡ್‌ನ ಫಾರ್ವರ್ಡ್ ಆಟಗಾರ ಗ್ರೆಗ್ ಸ್ಟಿವರ್ಟ್‌ ಅವರು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಮೊದಲ ಹ್ಯಾಟ್ರಿಕ್ ಗಳಿಸಿದ ಆಟಗಾರ ಎನಿಸಿಕೊಂಡರು. ತಿಲಕ್‌ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಟಿವರ್ಟ್ ಅವರ ಅಮೋಘ ಆಟದ ಬಲದಿಂದ ಜೆಮ್ಶೆಡ್‌ಪುರ್ ಎಫ್‌ಸಿ ತಂಡ ಒಡಿಶಾ ಎಫ್‌ಸಿಯನ್ನು 4–0ಯಿಂದ ಮಣಿಸಿತು. ನಾಲ್ಕನೇ ನಿಮಿಷದಲ್ಲಿ ಪೀಟರ್ ಹಾರ್ಟ್ಲಿ ಗಳಿಸಿದ ಗೋಲಿನ ಮೂಲಕ ಜೆಮ್ಶೆಡ್‌ಪುರ ಮುನ್ನಡೆ ಸಾಧಿಸಿತು. ಒಂದು ನಿಮಿಷದ ನಂತರ ಸ್ಟಿವರ್ಟ್‌ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. 21 ಮತ್ತು 35ನೇ ನಿಮಿಷಗಳಲ್ಲಿ ಮತ್ತೆರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿ ತಂಡದ ಗೆಲುವನ್ನು ಖಾತರಿಪಡಿಸಿಕೊಂಡರು. ಚೆನ್ನೈಯಿನ್ ಅಜೇಯ ಓಟದ ನಿರೀಕ್ಷೆ ಫತೋರ್ಡದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ತಂಡ ಚೆನ್ನೈಯಿನ್ ಎಫ್‌ಸಿ ವಿರುದ್ಧ ಸೆಣಸಲಿದೆ. ಈ ಆವೃತ್ತಿಯಲ್ಲಿ ಇದುವರೆಗೆ ಅಜೇಯವಾಗಿರುವ ಚೆನ್ನೈಯಿನ್ ಮತ್ತೊಮ್ಮೆ ಪಾರಮ್ಯ ಮೆರೆಯಲು ಪ್ರಯತ್ನಿಸಲಿದ್ದು ಮುಂಬೈ ಸಿಟಿ ಗೆಲುವಿನ ಓಟ ಮುಂದುವರಿಸಲು ಪ್ರಯತ್ನಿಸಲಿದೆ. ಮುಂಬೈ ಸಿಟಿ ಎಫ್‌ಸಿ ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿದ್ದು 12 ಪಾಯಿಂಟ್‌ಗಳನ್ನು ಕಲೆ ಹಾಕಿದೆ. ನಾಲ್ಕು ಪಂದ್ಯಗಳ ಪೈಕಿ ತಲಾ ಎರಡು ಜಯ ಮತ್ತು ಎರಡು ಡ್ರಾ ಸಾಧಿಸಿರುವ ಚೆನ್ನೈಯಿನ್ ಬಳಿ ಎಂಟು ಪಾಯಿಂಟ್‌ಗಳಿವೆ. ಹಿಂದಿನ ಪಂದ್ಯದಲ್ಲಿ ಮುಂಬೈ 4–2ರಲ್ಲಿ ಜೆಮ್ಶೆಡ್‌ಪುರವನ್ನು ಮಣಿಸಿತ್ತು. ಮೊದಲಾರ್ಧದಲ್ಲಿ 3–0 ಮುನ್ನಡೆಯೊಂದಿಗೆ ತನ್ನ ಆಕ್ರಮಣದ ಬಲವನ್ನು ಸಾಬೀತು ಮಾಡಿತ್ತು. ಇಗರ್ ಆಂಗುಲೊ ಅವರು ಈ ಬಾರಿ ಅಮೋಘ ಸಾಮರ್ಥ್ಯ ತೋರುತ್ತಿದ್ದು ಕಾಸಿಯೊ ಗ್ಯಾಬ್ರಿಯೆಲ್‌, ಅಹಮ್ಮದ್ ಜಹೊ ಮತ್ತು ಮೊರ್ತಜಾ ಫಾಲ್ ಕೂಡ ಉತ್ತಮ ಲಯದಲ್ಲಿದ್ದಾರೆ. ಫತೋರ್ಡ ಕ್ರೀಡಾಂಗಣದಲ್ಲಿ ಮುಂಬೈ ಈ ವರೆಗೆ ಐಎಸ್‌ಎಲ್‌ನ 16 ಪಂದ್ಯಗಳಲ್ಲಿ ಆಡಿದ್ದು ಒಂಬತ್ತರಲ್ಲಿ ಜಯ ಗಳಿಸಿದೆ. 29 ಗೋಲುಗಳನ್ನು ಗಳಿಸಿದೆ. ಹೀಗಾಗಿ ಇದು ತಂಡದ ಅದೃಷ್ಟದ ಅಂಗಣವಾಗಿ ಪರಿಣಮಿಸಿದೆ. ಚೆನ್ನೈಯಿನ್ ತಂಡ ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದ್ದರೂ ಆಕ್ರಮಣದಲ್ಲಿ ಇನ್ನಷ್ಟು ಪಳಗಬೇಕಾಗಿದೆ. ಅವಕಾಶಗಳನ್ನು ಕೈಚೆಲ್ಲುವುದರ ಮೂಲಕ ಈ ಬಾರಿ ಕೆಲವು ಗೋಲುಗಳನ್ನು ತಂಡ ಕಳೆದುಕೊಂಡಿದೆ. ಈ ಸಮಸ್ಯೆಯಿಂದ ಹೊರಬರಲು ಯಾವ ತಂತ್ರಕ್ಕೆ ಮೊರೆಹೋಗುತ್ತದೆ ಎಂಬುದು ಸದ್ಯದ ಕುತೂಹಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.