ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಎಟಿಕೆಎಂಬಿ ಎದುರಾಳಿ ಬ್ಯಾಂಬೊಲಿಮ್‌: ಗೆಲುವಿನ ಲಯಕ್ಕೆ ಮರಳುವ ಹಂಬಲದಲ್ಲಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಗುರುವಾರ ಮುಖಾಮುಖಿಯಾಗಲಿವೆ. ಸತತ ಮೂರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿರುವ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ, ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಎಟಿಕೆ ಮೋಹನ್‌ ಬಾಗನ್‌ (ಎಟಿಕೆಎಂಬಿ) ಕೂಡ ಕಳೆದ ಮೂರು ಪಂದ್ಯಗಳಲ್ಲಿ ಗೆದ್ದಿಲ್ಲ. ಹೀಗಾಗಿ ಉಭಯ ತಂಡಗಳೂ ಗೆಲುವಿಗಾಗಿ ಪಣ ತೊಟ್ಟಿವೆ. ಬೆಂಗಳೂರು ತಂಡವು ಇದುವರೆಗೆ ಎದುರಾಳಿಗಳಿಗೆ 12 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಇದು ತಂಡದ ಅತ್ಯಂತ ಕಳಪೆ ದಾಖಲೆಯಾಗಿದೆ. ಕಳೆದ 10 ಪಂದ್ಯಗಳಲ್ಲಿ ಒಂದೂ ಕ್ಲೀನ್‌ ಶೀಟ್‌ ಸಾಧಿಸಿಲ್ಲ. ಕ್ಲೀಟನ್ ಸಿಲ್ವಾ ಹಾಗೂ ಪ್ರಿನ್ಸ್ ಇಬಾರ ಅವರನ್ನು ಹೊರತುಪಡಿಸಿ ವಿದೇಶಿ ಆಟಗಾರರು ಉತ್ತಮ ಸಾಮರ್ಥ್ಯ ತೋರುವಲ್ಲಿ ವಿಫಲರಾಗುತ್ತಿರುವುದು ತಂಡದ ಕಳವಳ ಹೆಚ್ಚಿಸಿದೆ. ಸುನಿಲ್‌ ಚೆಟ್ರಿ ಕೂಡ ಲಯಕ್ಕೆ ಮರಳಬೇಕಿದೆ. ಕಳೆದ ಆವೃತ್ತಿಯ ಫೈನಲಿಸ್ಟ್ ಆಗಿದ್ದ ಎಟಿಕೆಎಂಬಿ ಕೂಡ ಇದುವರೆಗೆ ಎಂಟು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಈ ಗೆಲುವು ಆ ತಂಡವನ್ನು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ನಾಲ್ಕರ ಸ್ಥಾನಕ್ಕೆ ಕೊಂಡೊಯ್ಯಲಿದೆ. ಮೈಲಿಗಲ್ಲಿನತ್ತ ರಾಯ್‌ ಕೃಷ್ಣ: ಎಟಿಕೆಎಂಬಿ ತಂಡದ ರಾಯ್‌ ಕೃಷ್ಣ ಅವರು ಐಎಸ್‌ಎಲ್‌ನಲ್ಲಿ 50ನೇ ಪಂದ್ಯವಾಡಲಿದ್ದಾರೆ. ಈ ಪಂದ್ಯದಲ್ಲಿ ಕಣಕ್ಕಿಳಿದರೆ ಅವರು ಪಂದ್ಯಗಳ ‘ಅರ್ಧಶತಕ‘ ಗಳಿಸಿದ 21ನೇ ವಿದೇಶಿ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.