69 ಮೀಟರ್ ಎತ್ತರದ ಮೆಸ್ಸಿ ಭಿತ್ತಿಚಿತ್ರ: ತವರು ರೊಸಾರಿಯೊದಲ್ಲಿ ಗೌರವ ರೊಸಾರಿಯೊ: ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿಯ 69 ಮೀಟರ್ಸ್ ಎತ್ತರದ ವರ್ಣಚಿತ್ರವನ್ನು ಅವರ ತವರೂರು ರೊಸಾರಿಯೊದಲ್ಲಿ ಅಳವಡಿಸಲಾಗಿದೆ. ವಿಶ್ವದ ಅಗ್ರಮಾನ್ಯ ಫುಟ್‌ಬಾಲ್ ತಾರೆಯರಲ್ಲಿ ಒಬ್ಬರಾಗಿರುವ ಅರ್ಜೆಂಟಿನಾದ ಮೆಸ್ಸಿಗೆ ತವರೂರಿನ ಅಭಿಮಾನಿಗಳು ಈ ಗೌರವ ನೀಡಿದ್ದಾರೆ. ಸ್ಥಳೀಯ ಕಲಾವಿದರಾದ ಮಾರ್ಲೆನ್ ಝುರೈಗಾ ವೈ ಲಿಸಾಂದ್ರೊ ಆರ್ಟಿಗಾ ಈ ಬೃಹತ್ ಕಲಾಕೃತಿಯನ್ನು ರಚಿಸಿದ್ದಾರೆ. ತಾವು ನಾಯಕರಾಗಿರುವ ಅರ್ಜೆಂಟಿನಾ ತಂಡದ ಪೋಷಾಕು ಧರಿಸಿರುವ ಮೆಸ್ಸಿಯ ಚಿತ್ರ ಇದಾಗಿದೆ. ಎದೆಯ ಮೇಲೆ ಅವರ ಕ್ರಮಾಂಕ 10 ಮುದ್ರಿತವಾಗಿದೆ. ಸೂರ್ಯನ ಪ್ರಕಾಶಮಾನ ಕಿರಣಗಳ ಪ್ರಭಾವಳಿ ಆವರಿಸಿರುವ ಚಿತ್ರ ಇದು. ‘ಅನ್ಯಗ್ರಹದವರು, ಆದರೂ ನಮ್ಮ ನಗರದವರು’ ಎಂಬ ಗೀಚುಬರಹವೂ ಈ ಚಿತ್ರದ ಮೇಲೆ ಇದೆ. ಫುಟ್‌ಬಾಲ್‌ನಲ್ಲಿ ಅವರು ಸಾಧಿಸಿದ ದಾಖಲೆ ಮತ್ತು ಎತ್ತರವು ಈ ಗ್ರಹದಲ್ಲಿ ಜನಿಸಿದವರಿಂದ ಸಾಧ್ಯವಿಲ್ಲ ಎಂಬರ್ಥದ ಒಕ್ಕಣೆ ಇದಾಗಿದೆ. ಈ ಕಲಾಕೃತಿಯನ್ನು ನಗರದ ಬಹಳಷ್ಟು ಕಟ್ಟಡಗಳ ಮೇಲೆ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಚಿತ್ರದ ಅನಾವರಣ ಕಾರ್ಯಕ್ರಮಕ್ಕೆ ಸ್ಥಳೀಯ ಶಾಲೆಗಳ ಮಕ್ಕಳನ್ನು ಆಹ್ವಾನಿಸಲಾಗಿತ್ತು. ಮೆಸ್ಸಿ ತಮ್ಮ ಆರನೇ ವಯಸ್ಸಿನಲ್ಲಿ ರೊಸಾರಿಯೊದ ಗ್ರಾಂಡೋಲಿ ಕ್ಲಬ್ ನಲ್ಲಿ ಫುಟ್‌ಬಾಲ್ ಆಡಲು ಆರಂಭಿಸಿದ್ದರು. ಕೆಲಕಾಲದ ನಂತರ ಅವರು ನ್ಯೂವೆಲ್ಸ್‌ ಓಲ್ಡ್‌ ಬಾಯ್ಸ್‌ ಕ್ಲಬ್‌ಗೆ ಸೇರಿದ್ದರು. ಮೆಸ್ಸಿ ಈಗ ವಿಶ್ವದ ಅತಿ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್‌ಗೆ ಆಡುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.