ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಮುಂಬೈ ಸಿಟಿಗೆ ಕೇರಳ ಬ್ಲಾಸ್ಟರ್ಸ್‌ ಸವಾಲು ಮಡಗಾಂವ್‌: ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ತಂಡವು ಜಯದ ಸರಣಿಯನ್ನು ಮುಂದುವರಿಸುವ ಛಲದಲ್ಲಿದ್ದು, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ಕೇರಳ ಬ್ಲಾಸ್ಟರ್ಸ್‌ ಸವಾಲು ಎದುರಿಸಲಿದೆ. ಮುಂಬೈ ತಂಡವು ಸದ್ಯ ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದೆ. ಕಳೆದ ಪಂದ್ಯದಲ್ಲಿ ಆ ತಂಡವು 1–0 ಯಿಂದ ಚೆನ್ನೈ ತಂಡಕ್ಕೆ ಸೋಲುಣಿಸಿತ್ತು. ಆರು ಪಂದ್ಯಗಳಿಂದ 15 ಪಾಯಿಂಟ್ಸ್ ಕಲೆಹಾಕಿರುವ ಮುಂಬೈ, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇ ಆಫ್‌ ಮೇಲೆ ಕಣ್ಣಿಟ್ಟಿರುವ ತಂಡವು ಜಯದ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಮಿಡ್‌ಫೀಲ್ಡರ್‌, ಮೊರಾಕ್ಕೊದ ಅಹಮದ್ ಜಹೊಹ್ ಆ ತಂಡದ ಶಕ್ತಿಯಾಗಿದ್ದಾರೆ. ತಂಡವು ಆಡಿದ ಪಂದ್ಯಗಳಲ್ಲಿ ಅವರು ಐದರಲ್ಲಿ ಗೋಲು ಗಳಿಸಲು ನೆರವು ನೀಡಿದ್ದಾರೆ. ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಕೇರಳ ಬ್ಲಾಸ್ಟರ್ಸ್ ಇದುವರೆಗೆ ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ. ಈ ಪಂದ್ಯದ ಮೂಲಕ ಜಯದ ಲಯಕ್ಕೆ ಮರಳುವ ಯೋಚನೆಯಲ್ಲಿದೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಕೋಚ್‌ ಹಬಾಸ್‌ ಕೈಬಿಟ್ಟ ಎಟಿಕೆಎಂಬಿ: ಎಟಿಕೆ ಮೋಹನ್ ಬಾಗನ್ ತಂಡವು ಮುಖ್ಯ ಕೋಚ್ ಆಂಟೊನಿಯೊ ಹಬಾಸ್ ಅವರನ್ನು ಕೋಚ್‌ ಹುದ್ದೆಯಿಂದ ಕೈಬಿಟ್ಟಿದೆ. ಸ್ಪೇನ್‌ನ ಹಬಾಸ್‌, ಐಎಸ್‌ಎಲ್‌ನಲ್ಲಿ ತಂಡವೊಂದಕ್ಕೆ ಎರಡು ಬಾರಿ ಪ್ರಶಸ್ತಿ ಗೆದ್ದುಕೊಟ್ಟ ಮೊದಲ ಕೋಚ್‌ ಆಗಿದ್ದಾರೆ. ಎಟಿಕೆಎಂಬಿ ತಂಡವು ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ದಾಖಲಿಸಿಲ್ಲ. ಹೀಗಾಗಿ ಹಬಾಸ್‌ ಸ್ಥಾನಕ್ಕೆ ಕುತ್ತು ಬಂದಿದೆ. 2014ರಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ (ಎಟಿಕೆ) ತಂಡಕ್ಕಾಗಿ ಪ್ರಶಸ್ತಿ ಗೆದ್ದಿದ್ದ ಹಬಾಸ್‌, 2019ರಲ್ಲಿ ಎಟಿಕೆಎಂಬಿ ತಂಡವನ್ನು ಚಾಂಪಿಯನ್ ಆಗಿಸಿದ್ದರು. ‘ಮುಖ್ಯ ಕೋಚ್‌ ಹುದ್ದೆಯಿಂದ ಹಬಾಸ್ ಅವರನ್ನು ಬಿಡುಗಡೆ ಮಾಡಲಾಗಿದೆ‘ ಎಂದು ಎಟಿಕೆಎಂಬಿ ಪ್ರಕಟಣೆಯಲ್ಲಿ ತಿಳಿಸಿದೆ. ಸಹಾಯಕ ಕೋಚ್‌ ಆಗಿರುವ ಮ್ಯಾನ್ಯುಯೆಲ್ ಕ್ಯಾಸಲ್ಲಾನ ಅವರು ತಂಡದ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.