ಬೆಂಗಳೂರು ಎಫ್‌ಸಿ ಜಯಭೇರಿ ವಾಸ್ಕೊ: ಪಂದ್ಯದ ಕೊನೆಯ ಘಟ್ಟದಲ್ಲಿ ತಿರುಗೇಟು ನೀಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಭರ್ಜರಿ ಜಯ ಗಳಿಸಿತು. ಚೆನ್ನೈಯಿನ್ ಎಫ್‌ಸಿ ವಿರುದ್ಧ ತಿಲಕ್ ಮೈದಾನ್ ಕ್ರಿಡಾಂಗಣದಲ್ಲಿ ರಾತ್ರಿ ನಡೆದ ಹಣಾಹಣಿಯಲ್ಲಿ ಬಿಎಫ್‌ಸಿ 4–2ರಲ್ಲಿ ಜಯಭೇರಿ ಮೊಳಗಿಸಿತು. ನಾಲ್ಕನೇ ನಿಮಿಷದಲ್ಲಿ ಮುರ್ಜೇವ್ ಗಳಿಸಿದ ಗೋಲಿನೊಂದಿಗೆ ಚೆನ್ನೈಯಿನ್ ಮುನ್ನಡೆ ಗಳಿಸಿತು. 39ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಕ್ಲೀಟನ್ ಸಿಲ್ವಾ ಸಮಬಲ ತಂದುಕೊಟ್ಟರು. 43ನೇ ನಿಮಿಷದಲ್ಲಿ ಅಲನ್ ಕೋಸ್ಟಾ ಗೋಲು ಗಳಿಸಿ ಬಿಎಫ್‌ಸಿ ಪಾಳಯದಲ್ಲಿ ನಿರೀಕ್ಷೆ ಮೂಡಿಸಿದರು. ಆದರೆ 49ನೇ ನಿಮಿಷದಲ್ಲಿ ರಹೀಂ ಮೂಲಕ ಚೆನ್ನೈಯಿನ್ ತಿರುಗೇಟು ನೀಡಿತು. ನಂತರ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. 70 ಮತ್ತು 74ನೇ ನಿಮಿಷಗಳಲ್ಲಿ ಕ್ರಮವಾಗಿ ಉದಾಂತ ಸಿಂಗ್ ಮತ್ತು ಪ್ರತೀಕ್ ಚೆಂಡನ್ನು ಗುರಿ ಮುಟ್ಟಿಸಿ ಬಿಎಫ್‌ಸಿಗೆ ಜಯ ಗಳಿಸಿಕೊಟ್ಟರು. ಇಂದು, ನಾಳೆ ಬಿಡುವು ಎಂಟನೇ ಆವೃತ್ತಿಯ ಮೊದಲ ಘಟ್ಟದ ಪಂದ್ಯಗಳಿಗೆ ಇನ್ನು ಎರಡು ದಿನ ಬಿಡುವು. ಕ್ರಿಸ್‌ಮಸ್‌ ಹಬ್ಬದಂದು ಮೊದಲ ಬಾರಿ ಬಿಡುವು ನೀಡಲಾಗಿತ್ತು. ಹೊಸ ವರ್ಷದ ಹಿನ್ನೆಲೆಯಲ್ಲಿ ಡಿಸೆಂಬರ್‌ 31 ಮತ್ತು 2022ರ ಜನವರಿ ಒಂದರಂದು ಪಂದ್ಯಗಳು ಇರುವುದಿಲ್ಲ. ಜನವರಿ ಎರಡರ ಭಾನುವಾರದಂದು ‘ಡಬಲ್ ಹೆಡರ್’ ಇರಲಿದೆ. ತಿಲಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಸೆಣಸಲಿವೆ. ಈ ಪಂದ್ಯ ರಾತ್ರಿ 7.30ಕ್ಕೆ ನಡೆಯಲಿದೆ. ಬ್ಯಾಂಬೊಲಿಮ್‌ನ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ 9.30ಕ್ಕೆ ನಡೆಯಲಿರುವ ಪ‍ಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. ಎಂಟು ಪಂದ್ಯಗಳಲ್ಲಿ ಐದು ಗೆಲುವು, ಒಂದು ಡ್ರಾ ಮತ್ತು ಎರಡು ಸೋಲಿನೊಂದಿಗೆ ಮುಂಬೈ ಸಿಟಿ ಎಫ್‌ಸಿ 16 ಪಾಯಿಂಟ್‌ಗಳೊಂದಿಗೆ ಪಟ್ಟಿಯ ಅಗ್ರ ಸ್ಥಾನದಲ್ಲಿದ್ದು ನಾಲ್ಕು ಜಯ, ಮೂರು ಡ್ರಾ ಮತ್ತು ಒಂದು ಸೋಲಿನೊಂದಿಗೆ 15 ಪಾಯಿಂಟ್ ಗಳಿಸಿರುವ ಹೈದರಾಬಾದ್ ಎಫ್‌ಸಿ ಎರಡನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.