ರಷ್ಯಾ ವಿರುದ್ಧ ಆಡುವುದಿಲ್ಲ: ಜೆಕ್‌ ಗಣರಾಜ್ಯ ಸ್ಪಷ್ಟನೆ ಪ್ರಾಗ್‌, ಜೆಕ್ ಗಣರಾಜ್ಯ: ಈ ವರ್ಷ ನಡೆಯಲಿರುವ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಪ್ಲೇ ಆಫ್ ಹಂತದ ಪಂದ್ಯದಲ್ಲಿ ರಷ್ಯಾ ವಿರುದ್ಧ ಸೆಣಸುವ ಪರಿಸ್ಥಿತಿ ನಿರ್ಮಾಣವಾದರೆ ಆಡುವುದಿಲ್ಲ ಎಂದು ಜೆಕ್ ಗಣರಾಜ್ಯದ ಫುಟ್‌ಬಾಲ್ ಸಂಸ್ಥೆ ಭಾನುವಾರ ಸ್ಪಷ್ಟಪಡಿಸಿದೆ. ’ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿದೆ. ಆದ್ದರಿಂದ ಪ್ಲೇ ಆಫ್‌ನಲ್ಲಿ ಆ ದೇಶದ ತಂಡದೊಂದಿಗೆ ಆಡುವುದು ಸರಿಯಲ್ಲ ಎಂಬುದು ನಮ್ಮ ನಿರ್ಧಾರ’ ಎಂದು ಜೆಕ್‌ ಫುಟ್‌ಬಾಲ್ ಸಂಸ್ಥೆ ತಿಳಿಸಿದೆ. ಸ್ವೀಡನ್ ಮತ್ತು ಪೋಲೆಂಡ್ ಫುಟ್‌ಬಾಲ್ ಸಂಸ್ಥೆಗಳು ಈಗಾಗಲೇ ರಷ್ಯಾ ವಿರುದ್ಧ ಆಡುವುದಿಲ್ಲ ಎಂದು ತಿಳಿಸಿವೆ. ವಿಶ್ವಕಪ್ ಪ್ಲೇ ಆಫ್‌ ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯ ತಂಡ ಮಾರ್ಚ್ 24ರಂದು ಸ್ವೀಡನ್ ವಿರುದ್ಧ ಸ್ಟಾಕ್ ಹೋಂನಲ್ಲಿ ಆಡಲಿದೆ. ರಷ್ಯಾ ಅದೇ ದಿನ ಪೋಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯಗಳಲ್ಲಿ ಜೆಕ್ ಗಣರಾಜ್ಯ ಮತ್ತು ರಷ್ಯಾ ಗೆದ್ದರೆ ಪರಸ್ಪರ ಮುಖಾಮುಖಿಯಾಗಲಿವೆ. ಇದೇ ವೇಳೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫೆಂಟಿನೊ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಶೀಘ್ರದಲ್ಲೇ ಶಮನಗೊಂಡು ವಿಶ್ವಕಪ್‌ ಸಂದರ್ಭದಲ್ಲಿ ಪರಿಸ್ಥಿತಿ ಸಹಜವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.