ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟ್ರೋಫಿಗಾಗಿ ಹೈದರಾಬಾದ್‌– ಜಮ್ಶೆಡ್‌ಪುರ ಹೋರಾಟ ಬ್ಯಾಂಬೊಲಿಮ್‌: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ಹೈದರಾಬಾದ್ ಎಫ್‌ಸಿ ಮತ್ತು ಜಮ್ಶೆಡ್‌ಪುರ ಎಫ್‌ಸಿ ತಂಡಗಳು ಮಂಗಳವಾರ ‘ಲೀಗ್‌ ವಿಜೇತ‘ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ. ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ 35 ಅಂಕಗಳೊಂದಿಗೆ ಮೊದಲ ಬಾರಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಹೈದರಾಬಾದ್ ಸದ್ಯ ಪಾಯಿಂಟ್ಸ್ ಪಟ್ಟಿಯ ಅಗ್ರಸ್ಥಾನದಲ್ಲಿದೆ. ನಾಲ್ಕರ ಘಟ್ಟ ತಲುಪಲು ಜಮ್ಶೆಡ್‌ಪುರ ತಂಡಕ್ಕೆ ಇನ್ನು ಒಂದು ಪಾಯಿಂಟ್‌ ಅಗತ್ಯವಿದೆ. ಸದ್ಯ 17 ಪಂದ್ಯಗಳಿಂದ ಆ ತಂಡವು 34 ಪಾಯಿಂಟ್ಸ್ ಗಳಿಸಿದೆ. ಈ ಪಂದ್ಯವು ಪಾಯಿಂಟ್ಸ್ ಪಟ್ಟಿಯ ಅಗ್ರಸ್ಥಾನವನ್ನು ಗಳಿಸುವ ತಂಡವನ್ನು ನಿರ್ಧರಿಸಲಿದೆ. ಜಮ್ಶೆಡ್‌ಪುರ ತಂಡಕ್ಕೆ ಪ್ರಮುಖ ಆಟಗಾರ ಗ್ರೆಗ್ ಸ್ಟೀವರ್ಟ್ ಅನುಪಸ್ಥಿತಿ ಪ್ರಮುಖ ಚಿಂತೆಯಾಗಿದೆ. ನಾರ್ತ್‌ಈಸ್ಟ್ ಯುನೈಟೆಡ್‌ ಎದುರಿನ ಪಂದ್ಯದ ಕೊನೆಯ ಕ್ಷಣದಲ್ಲಿ ಅವರು ನಾಲ್ಕನೇ ಹಳದಿ ಕಾರ್ಡ್‌ ಪಡೆದಿದ್ದರು. ಹೀಗಾಗಿ ಈ ಪಂದ್ಯದಿಂದ ಅವರು ಅಮಾನತು ಆಗಿದ್ದಾರೆ. ಹೈದರಾಬಾದ್‌ ತಂಡದ ಬಾರ್ತೊಲೊಮಿವ್ ಒಗ್ಬೆಚೆ ಅದ್ಭುತ ಲಯದಲ್ಲಿದ್ದು, ಅದೇ ಲಯ ಮುಂದುವರಿಸುವ ಹಂಬಲದಲ್ಲಿದ್ದಾರೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದ ವೇಳೆ 1–1ರಿಂದ ಸಮಬಲ ಸಾಧಿಸಿದ್ದವು. ಈ ಪಂದ್ಯದಲ್ಲಿ ಭಾರಿ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.